ಚೆನ್ನೈ: ” ಸನಾತನ ಧರ್ಮ ಪಾಲಿಸುವವರು ಹೆಚ್ಚಿನ ಬಾರಿ ನಿಂದಕರಿಗೆ ತಿರುಗೇಟು ಕೊಡಲ್ಲ. ಹಾಗಾಗಿ ದ್ವೇಷ ಪ್ರಚಾರಕರು ಪದೇಪದೆ ಅವಹೇಳನ ಮಾಡುತ್ತಾರೆ. ಧೈರ್ಯವಿದ್ದರೆ ಅನ್ಯ ಧರ್ಮಗಳಲ್ಲಿನ ತಾರತಮ್ಯತೆ ಬಗ್ಗೆಯೂ ಧ್ವನಿ ಎತ್ತಲಿ,” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸವಾಲು ಹಾಕಿದ್ದಾರೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಕೆಲ ದಿನಗಳ ಮುನ್ನ ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ,
ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ಕೊಟ್ಟಿದ್ದಾರೆ. ಸಚಿವ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರ ಹೇಳಿಕೆಗಳು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ” ಅನ್ಯ ಧರ್ಮಗಳಲ್ಲಿ ಮಹಿಳೆಯರನ್ನು ಹೀನಾಯ ರೀತಿಯಲ್ಲಿ ನಡೆಸಿಕೊಳ್ಳುವುದಿಲ್ಲವೇ? ಅದರ ಬಗ್ಗೆ ಮಾತನಾಡುವ ಧೈರ್ಯವಿದೆಯೇ?,” ಎಂದು ಉದಯನಿಧಿಗೆ ಅವರು ಪ್ರಶ್ನೆ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಚಿವೆ ನಿರ್ಮಲಾ ಅವರು, ತಮ್ಮ ಜತೆ ವೇದಿಕೆ ಹಂಚಿಕೊಂಡಿದ್ದ ತಮಿಳುನಾಡು ಮುಜರಾಯಿ ಸಚಿವ ಪಿ. ಶೇಖರ್ ಬಾಬು ಅವರಿಗೆ ಪ್ರಶ್ನೆ ಕೇಳಿದರು. ” ಹಿಂದೂಗಳು ಪೂಜಿಸುವ ಮಂದಿರಗಳನ್ನು ನಾಶಪಡಿಸುವ ಗುರಿಯಿರುವ ಭಾಷಣ ಮಾಡುವಾಗ ನೀವು ಅವುಗಳನ್ನು ಹೇಗೆ ರಕ್ಷಿಸುತ್ತೀರಿ? ನೀವು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಮಂದಿರಗಳಲ್ಲಿ ಸಂಗ್ರಹವಾಗುವ ಕಾಣಿಕೆ ಹಣವನ್ನು ನಿಮ್ಮ ಸರಕಾರ ಬಳಸುತ್ತಿಲ್ಲವೇ?,” ಎಂದು ಕುಟುಕಿದರು.