ಲಕ್ನೋ: ಉತ್ತರ ರೈಲ್ವೆಯ ಲಕ್ನೋ (Lucknow) ವಿಭಾಗವು ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂ. ಖರ್ಚು ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರ್ಟಿಐಗೆ ರೈಲ್ವೆ (Railway) ವಿಭಾಗ ಮಾಹಿತಿ ನೀಡಿದೆ. 2020 ಮತ್ತು 2022 ರ ಅವಧಿಯಲ್ಲಿ 69 ಲಕ್ಷ ರೂ. ಮೊತ್ತವನ್ನು ಇಲಿ ಹಿಡಿಯುವುದಕ್ಕೆ ರೈಲ್ವೆ ಖರ್ಚು ಮಾಡಿದೆ. ಸುದ್ದಿ ಬಹಿರಂಗವಾಗುತ್ತಿದ್ದಂತೆ ಭಾರತೀಯ ರೈಲ್ವೆ ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡಿದೆ. ಭಾರತೀಯ ರೈಲ್ವೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ.
ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ವಿಭಾಗವು, ಎರಡು ವರ್ಷಗಳಲ್ಲಿ ಇಲಿಗಳನ್ನು ಹಿಡಿಯುವುದಕ್ಕೆ ಸುಮಾರು 69 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲಾಗಿದೆ. ಒಂದು ಇಲಿ ಹಿಡಿಯುವುದಕ್ಕೆ ಸರಿಸುಮಾರು 41,000 ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದೆ.
ಈ ಕುರಿತು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ದೇಶದೆಲ್ಲೆಡೆ ‘ಭ್ರಷ್ಟಾಚಾರದ ಇಲಿಗಳು’ ಪ್ರತಿದಿನ ಜನರ ಜೇಬನ್ನು ಕಿತ್ತೊಗೆಯುತ್ತಿವೆ. ಬಿಜೆಪಿ ಆಡಳಿತದಲ್ಲಿ ಜನರು ಪ್ರತಿದಿನ ವಿಪರೀತ ಹಣದುಬ್ಬರದಿಂದ ಬಳಲುತ್ತಿದ್ದಾರೆ. ರೈಲು ಪ್ರಯಾಣ ದರದಲ್ಲಿ ವೃದ್ಧರಿಗೆ ನೀಡುತ್ತಿದ್ದ ರಿಯಾಯಿತಿಯನ್ನೂ ಕಬಳಿಸಿದೆ. ಹೀಗಿದ್ದೂ, ನಾನು ತಿನ್ನುವುದಿಲ್ಲ.. ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಾರೆಂದು ಬಿಜೆಪಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.