ಸಂಜೆ ಚಹಾದ ಜೊತೆ ಜೊತೆ ಕೆಲವರಿಗೆ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲೂ ಮಕ್ಕಳಿಗೆ ಬಿಸ್ಕೆಟ್ ಕೊಟ್ಟರೆ ತುಂಬಾ ಖುಷಿಯಿಂದ ತಿಂದು ಮುಗಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳಿಗೆ ಸಂಜೆ ಸ್ನಾಕ್ಸ್ಗೆ ಕೆಲ ಅಮ್ಮಂದಿರು ಬಿಸ್ಕೆಟ್ ಕೊಡುತ್ತಾರೆ. ಇದರಿಂದ ಮಕ್ಕಳ ಹಸಿವು ತಕ್ಕಮಟ್ಟಿಗೆ ನೀಗುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಚೋಕೋ ಚಿಪ್ ಕುಕ್ಕೀಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿದ್ದೇವೆ ಒಮ್ಮೆ ಟ್ರೈ ಮಾಡಿ ನೋಟಿ!
ಬೇಕಾಗುವ ಸಾಮಗ್ರಿಗಳು:
ಬೆಣ್ಣೆ- 100 ಗ್ರಾಂ
ಚೋಕೋ ಚಿಪ್ಸ್ – 2 ಕಪ್
ಬ್ರೌನ್ ಶುಗರ್ – 1 ಕಪ್
ಸಕ್ಕರೆ – ಅರ್ಧ ಕಪ್
ಮೈದಾ ಹಿಟ್ಟು – 2 ಕಪ್
ಬೇಕಿಂಗ್ ಸೋಡಾ – 1 ಚಮಚ
ವೆನಿಲ್ಲಾ ಎಸೆನ್ಸ್- 2 ಚಮಚ
ಉಪ್ಪು – ಅರ್ಧ ಚಮಚ
ಮೊಟ್ಟೆ – 2
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಬೆಣ್ಣೆ ಹಾಕಿಕೊಂಡು ಅದಕ್ಕೆ ಬ್ರೌನ್ ಶುಗರ್, ಸಕ್ಕರೆ ಹಾಕಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ. ಬೆಣ್ಣೆ ತುಂಬಾ ಗಟ್ಟಿಯಾಗಿರಬಾರದು.
* ಈಗ ಈ ಮಿಶ್ರಣಕ್ಕೆ ಎರಡು ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ನಂತರ ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ.
* ಇನ್ನೊಂದು ಬೌಲ್ನಲ್ಲಿ ಮೈದಾ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಉಪ್ಪು ಮತ್ತು ಬೇಕಿಂಗ್ ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಮೊಟ್ಟೆ ಮಿಶ್ರಣಕ್ಕೆ ಹಾಕಿಕೊಂಡು ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಈ ಮಿಶ್ರಣಕ್ಕೆ ಚೋಕೋ ಚಿಪ್ಸ್ ಹಾಕಿಕೊಂಡು ಚಿಪ್ಸ್ ಮಿಶ್ರಣಕ್ಕೆ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
* ಈಗ ಒಂದು ಚಮಚದ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಈ ಮಿಶ್ರಣವನ್ನು ತೆಗೆದುಕೊಂಡು ಅಂಗೈಯಲ್ಲಿ ಬಿಸ್ಕೆಟ್ ಗಾತ್ರ ಮಾಡಿಕೊಂಡು ಒಂದು ಬೇಕಿಂಗ್ ಟ್ರೇಯಲ್ಲಿ ಹಾಕಿಕೊಳ್ಳಿ. ನಂತರ ಓವನ್ 180 ಡಿಗ್ರಿ ಬಿಸಿಗಿಟ್ಟುಕೊಂಡು ಅದರಲ್ಲಿ 15 ನಿಮಿಷ ಬೇಯಿಸಿಕೊಳ್ಳಿ.
* ಈಗ ಬಿಸಿ ಬಿಸಿ ಚೋಕೋ ಚಿಪ್ ಕುಕ್ಕೀಸ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್ನಲ್ಲಿ ಹಾಕಿ ಮಕ್ಕಳಿಗೆ ತಿನ್ನಲು ಕೊಡಿ.