ಇಸ್ಲಾಮಾಬಾದ್: ನಿಂತಿದ್ದ ಗೂಡ್ಸ್ ರೈಲಿಗೆ ಪ್ರಯಾಣಿಕರಿದ್ದ ರೈಲು ಡಿಕ್ಕಿ ಹೊಡೆದು 31 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ (Pakistan Train Crash) ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ
ಲಾಹೋರ್ಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನ ಚಾಲಕ, ಆತನ ಸಹಾಯಕ ಮತ್ತು ಇಬ್ಬರು ಗ್ರೌಂಡ್ ಸಿಬ್ಬಂದಿಯನ್ನು ನಿರ್ಲಕ್ಷ್ಯದ ಕಾರಣಕ್ಕೆ ರೈಲ್ವೇ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ ಎಂದು ರೈಲ್ವೆಯ ಉನ್ನತ ಅಧಿಕಾರಿ ಶಾಹಿದ್ ಅಜೀಜ್ ತಿಳಿಸಿದ್ದಾರೆ.
ಮಿಯಾನ್ವಾಲಿಯಿಂದ ಲಾಹೋರ್ಗೆ ಹೊರಟಿದ್ದ ಪ್ರಯಾಣಿಕರಿದ್ದ ರೈಲನ್ನು ಗೂಡ್ಸ್ ರೈಲು ನಿಂತಿದ್ದ ಟ್ರ್ಯಾಕ್ನಲ್ಲಿ ಹೋಗಲು ನಿರ್ದೇಶಿಸಲಾಗಿದೆ. ಹೀಗಾಗಿ ಇಂದು ಮುಂಜಾನೆ ಕಿಲಾ ಸತ್ತಾರ್ ಶಾ ನಿಲ್ದಾಣದ ಬಳಿ ಶೈಖುಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪಾಕ್ ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಹೆಚ್ಚಿನವರಿಗೆ ರೈಲು ನಿಲ್ದಾಣದಲ್ಲೇ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಳಿಗಳನ್ನು ತಕ್ಷಣ ತೆರವುಗೊಳಿಸಲಾಯಿತು. ದಶಕಗಳಷ್ಟು ಹಳೆಯದಾದ ಸಿಗ್ನಲ್ ವ್ಯವಸ್ಥೆ ಮತ್ತು ಹಳಿಗಳಿಂದಾಗಿ ಪಾಕಿಸ್ತಾನದಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿದೆ