ಹಲವು ಉನ್ನತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶನಿವಾರ ಕೋರ್ಟ್ಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ. ಈ ವೇಳೆ ಬ್ರಿಜ್ ಭೂಷಣ್ ವಿರುದ್ಧ ಗಂಭೀರ ಆರೋಪ ಮಾಡಿರುವ ದೆಹಲಿ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ ಎಂದು ವಾದಿಸಿದ್ದಾರೆ.
ಮಹಿಳಾ ಕುಸ್ತಿಪಟುವೊಬ್ಬರ ದೂರನ್ನು ಉಲ್ಲೇಖಿಸಿ, ಹೇಳಿಕೆ ನೀಡಿದ ದೆಹಲಿ ಪೊಲೀಸರು, ತಜಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಪಿ ದೂರುದಾರರನ್ನು ಕೋಣೆಗೆ ಕರೆದು ಬಲವಂತವಾಗಿ ತಬ್ಬಿಕೊಂಡಿದ್ದಾರೆ. ದೂರುದಾರರು ಇದನ್ನು ವಿರೋಧಿಸಿದಾಗ ಬ್ರಿಜ್ ಭೂಷಣ್ ತಾನು ನಿಮ್ಮ ತಂದೆಯಂತೆ ಎಂದು ಹೇಳಿ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಅವರಿಗೆ ತಮ್ಮ ಕೃತ್ಯಗಳ ಬಗ್ಗೆ ಸಂಪೂರ್ಣ ಅರಿವಿತ್ತು ಎಂಬುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮತ್ತೊಂದು ದೂರನ್ನು ಉಲ್ಲೇಖಿಸಿ, ತಜಕಿಸ್ತಾನದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಸಂದರ್ಭದಲ್ಲಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅನುಮತಿಯಿಲ್ಲದೆ ತನ್ನ ಅಂಗಿಯನ್ನು ಮೇಲಕ್ಕೆತ್ತಿ, ಅನುಚಿತವಾಗಿ ತನ್ನ ಹೊಟ್ಟೆಯನ್ನು ಮುಟ್ಟಿದ್ದಾರೆ ಎಂದು ಮಹಿಳಾ ಕುಸ್ತಿಪಟು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ನ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣವನ್ನು ಉಲ್ಲೇಖಿಸಿ, ಆ ಪ್ರಕರಣದಲ್ಲಿ ಹಲವಾರು ಎಫ್ಐಆರ್ಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಆದರೆ ನ್ಯಾಯಾಲಯವು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಆಲಿಸಿದೆ ಎಂದು ಹೇಳಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ತನಿಖೆಗಾಗಿ ಸರ್ಕಾರ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯು ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ದೆಹಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.