ಹ್ಯಾಂಗ್ಝೌ: ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಪಾಲ್ಗೊಂಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ (Indian Women’s Team) ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. 2014ರಲ್ಲಿ ಕಂಚಿನ ಪದಕ ಗೆದ್ದಿದ್ದ ಶ್ರೀಲಂಕಾ ತಂಡ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಝೆಜಿಯಾಂಗ್ ಟೆಕ್ ವಿವಿ ಕ್ರೀಡಾಂಗಣದಲ್ಲಿಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತೀಯ ಮಹಿಳಾ ತಂಡ 20 ಓವರ್ಗಳಲ್ಲಿ 116 ರನ್ ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ (SriLanka) ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇದರಿಂದ ಭಾರತ 19 ರನ್ಗಳ ಜಯ ಸಾಧಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿತು.
2010ರ ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಪಾಕಿಸ್ತಾನ ಚಿನ್ನ ಗೆದ್ದರೆ, ಬಾಂಗ್ಲಾದೇಶ ಬೆಳ್ಳಿ ಹಾಗೂ ಜಪಾನ್ ಕಂಚಿನ ಪದಕ ಗೆದ್ದುಕೊಂಡಿತ್ತು. 2014ರಲ್ಲಿ ಪಾಕಿಸ್ತಾನ ಸತತ 2ನೇ ಬಾರಿ ಚಿನ್ನ ಗೆದ್ದರೆ, ಬಾಂಗ್ಲಾದೇಶ ತಂಡ ಬೆಳ್ಳಿ ಹಾಗೂ ಶ್ರೀಲಂಕಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದ್ರೆ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ಗೆ ತೆರಳಿದ ಭಾರತ ತಂಡ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿತು.
ಚೇಸಿಂಗ್ ಆರಂಭಿಸಿದ ಲಂಕಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಹಾಸಿನಿ ಪೆರೆರಾ, ನೀಲಾಕ್ಷಿ ಡಿ ಸಿಲ್ವಾ ಹಾಗೂ ಓಷದಿ ರಣಸಿಂಗ್ ಅವರಿಂದ ಸಣ್ಣ ಪ್ರಮಾಣದ ಜೊತೆಯಾಟ ಬಂದರೂ ತಂಡ ನಿಗದಿತ ರನ್ ಕಲೆಹಾಕುವಲ್ಲಿ ವಿಫಲವಾಯಿತು. ಟೀಂ ಇಂಡಿಯಾ ಬೌಲರ್ಗಳ ದಾಳಿಗೆ ತತ್ತರಿಸಿದ ಲಂಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಮಂಡಿಯೂರಿತು.