ಇಸ್ಲಾಮಾಬಾದ್: ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ (World Cup 2023) ಟೂರ್ನಿ ಆರಂಭವಾಗಲಿದ್ದು, ಭಾರತಕ್ಕೆ ಪ್ರಯಾಣಿಸಬೇಕಿರುವ ಕ್ರಿಕೆಟ್ ಆಟಗಾರರಿಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೂ (ICC) ಪತ್ರ ಬರೆದಿದೆ.
ವಿಶ್ವಕಪ್ ಟೂರ್ನಿಗೆ ಇನ್ನೂ 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಭಾರತಕ್ಕೆ ಪ್ರಯಾಣಿಸಲು ಎಲ್ಲಾ ತಂಡಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಆದ್ರೆ ಪಾಕಿಸ್ತಾನ ತಂಡಕ್ಕೆ ವೀಸಾ ಸಮಸ್ಯೆ (Visa clearance Problem) ಶುರುವಾಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ವಿಶ್ವಕಪ್ಗೂ ಮುನ್ನ ಪಾಕ್ ತಂಡ ದುಬೈಗೆ ತೆರಳಬೇಕಿತ್ತು. ಆದ್ರೆ ಶುಕ್ರವಾರದವರೆಗೂ ಭಾರತ ಸರ್ಕಾರವು ಪಾಕಿಸ್ತಾನ ತಂಡಕ್ಕೆ ವೀಸಾಗೆ ಅನುಮೋದನೆ ನೀಡಿಲ್ಲ. ಇದರಿಂದಾಗಿ ಈ ದುಬೈ ಪ್ರವಾಸವನ್ನೂ ರದ್ದುಗೊಳಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ
ಸದ್ಯ ವೀಸಾ ಸಮಸ್ಯೆಗೆ ಸಿಲುಕಿರುವ ಪಾಕಿಸ್ತಾನ (Pakistan), ಐಸಿಸಿಗೆ ಪತ್ರ ಬರೆದಿದೆ. ನಮ್ಮ ಆಟಗಾರರಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನಿಂದ ವೀಸಾ ಕ್ಲಿಯರೆನ್ಸ್ಗಾಗಿ ಕಾಯುತ್ತಿದ್ದೇವೆ. ನಮ್ಮ ಆಟಗಾರರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ವಿಶ್ವಕಪ್ಗೆ ತೆರಳಬೇಕಿರುವ ಆಟಗಾರರು, ತಂಡದ ಅಧಿಕಾರಿಗಳು, ಕ್ರಿಕೆಟ್ ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ವೀಸಾ ಇನ್ನೂ ಸಿಕ್ಕಿಲ್ಲ. ಭಾರತೀಯ ಗೃಹ ಸಚಿವಾಲಯವು NOC ನೀಡಿಲ್ಲ, ಇಂತಹ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ಹೊರಹಾಕಿದೆ.