ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಭಾರತ ದೇಶವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಹಲವು ದೇಶಗಳನ್ನಾಗಿ ವಿಭಜಿಸುವ ಗುರಿ ಹೊಂದಿದ್ದ. ಅದು ಅವನ ಅಜೆಂಡಾ ಆಗಿತ್ತು ಅನ್ನೋ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ವಾರವಷ್ಟೇ ಖಲಿಸ್ತಾನಿ ಉಗ್ರ (Khalistani Terrorist) ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಆಸ್ತಿಗಳನ್ನ NIA ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪಂಜಾಬ್ ರಾಜ್ಯದ ಚಂಡೀಗಢ ಹಾಗೂ ಅಮೃತಸರದಲ್ಲಿ ಇದ್ದ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಮನೆಗಳನ್ನ ವಶಕ್ಕೆ ಪಡೆಯಲಾಗಿತ್ತು.
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನಾಗಿರುವ ಪನ್ನು, ಭಾರತ ದೇಶದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ರೀತಿ ಹಾಗೂ ಸವಾಲೊಡ್ಡುವ ರೀತಿ ಆಡಿಯೋ ಸಂದೇಶಗಳನ್ನ ರವಾನಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಈತ ಪಂಜಾಬ್ ರಾಜ್ಯವನ್ನ ಖಲಿಸ್ತಾನ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿದ್ದ. ಅಷ್ಟು ಸಾಲದೇ ಕಾಶ್ಮೀರವನ್ನ ಪ್ರತ್ಯೇಕ ರಾಷ್ಟ್ರ ಆಗಬೇಕು, ಮುಸ್ಲಿಮರ ದೇಶ (Muslims Nation) ಆಗಬೇಕು ಎಂದು ಬಯಸಿದ್ದ ಅನ್ನೋ ಮಾಹಿತಿ ಕೂಡ ಗುಪ್ತಚರ ಇಲಾಖೆ ಮೂಲಗಳಿಂದ ಬೆಳಕಿಗೆ ಬಂದಿದೆ.