ಒಟ್ಟಾವಾ: ಕೆನಡಾದ (Canada) ಸರ್ಕಾರ ಭಾರತದಲ್ಲಿರುವ (India) ತನ್ನ ನಾಗರಿಕರಿಗೆ ಜಾಗರೂಕರಾಗಿರುವಂತೆ ಸಲಹೆಯನ್ನು ನೀಡಿದೆ.
ಕೆನಡಾ ಹಾಗೂ ಭಾರತದ ನಡುವೆ ಇತ್ತೀಚೆಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟು ಹಿನ್ನೆಲೆ ಕೆನಡಾ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆನಡಾದ ಬಗ್ಗೆ ಪ್ರತಿಭಟನೆಗಳು ಹಾಗೂ ಕೆಲವು ನಕಾರಾತ್ಮಕ ಭಾವನೆಗಳಿಗೆ ಕರೆ ನೀಡಲಾಗಿದೆ ಎಂದು ತಿಳಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ಹಾಗೂ ಕೆನಡಾದ ನಡುವೆ ಉದ್ವಿಗ್ನದ ಸ್ಥಿತಿ ನಿರ್ಮಾಣವಾಗಿದೆ. ಕೆನಡಾದ ಈ ಆರೋಪವನ್ನು ಭಾರತ ತಿರಸ್ಕರಿಸಿದೆ.
ಕೆನಡಾ ಸರ್ಕಾರ ತನ್ನ ಪ್ರಯಾಣಿಕರಿಗೆ ನೀಡಿದ ಸಲಹೆಯಲ್ಲಿ, ಕೆನಡಾ ಮತ್ತು ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಿಗೆ ಕರೆಗಳು ಹಾಗೂ ಕೆನಡಾದ ಬಗ್ಗೆ ಕೆಲವು ನಕಾರಾತ್ಮಕ ಭಾವನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.