ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್ ಟೂರ್ನಿಯ ಅಂಗವಾಗಿ ಅಕ್ಟೋಬರ್ 14 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸಾಂಪ್ರದಾಯಿಕ ವೈರಿಗಳಾದ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಆಕ್ರಮಣಕಾರಿ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಮೇಲೆ ಪಾಕ್ ವೇಗಿ ಹ್ಯಾರಿಸ್ ರೌಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವೇಕೆ ಭಾರತದ ಜೊತೆ ಯುದ್ಧ ಮಾಡಬೇಕು? ಇದು ಕ್ರಿಕೆಟ್, ಯುದ್ಧ ಅಲ್ಲ” ಎಂದು 2023ರ ವಿಶ್ವಕಪ್ ಟೂರ್ನಿಗೂ ಮುನ್ನ ಪತ್ರಕರ್ತರು ಕೇಳಿದ ಆಕ್ರಮಣಶೀಲತೆಯ ಪ್ರಶ್ನೆಗೆ ರೌಫ್ ಖಡಕ್ ಉತ್ತರ ನೀಡಿದ್ದಾರೆ.
ಪಾಕಿಸ್ತಾನ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದ ವೇಳೆ ಭುಜದ ನೋವಿನಿಂದ ಹ್ಯಾರಿಸ್ ರೌಫ್ ತಂಡದಿಂದ ದೂರ ಉಳಿದಿದ್ದರು. ಆದರೆ ಈಗ ನಾನು ಮೊದಲಿಗಿಂತಲೂ ಹೆಚ್ಚು ಫಿಟ್ನೆಸ್ ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
“ಈ ವಿಶ್ವಕಪ್ ಗಾಗಿ ನಾನು ಯಾವುದೇ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಿಲ್ಲ. ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಪ್ರದರ್ಶನ ವಿಶ್ವಕಪ್ ನಂತಹ ಟೂರ್ನಿಗಳಲ್ಲಿ ಮುಖ್ಯ ಆಗುತ್ತದೆ” ಎಂದು ಹ್ಯಾರಿಸ್ ರೌಫ್ ಹೇಳಿದರು.