ಲಕ್ನೋ: ಪಾಕಿಸ್ತಾನಿ (Pakistan) ಗುಪ್ತಚರ ಸಂಸ್ಥೆ ಐಎಸ್ಐಗೆ ಸೇನೆಯ ಚಲನವಲನದ ಮಾಹಿತಿ ರವಾನಿಸಿದ ಆರೋಪದ ಮೇಲೆ ಸೇನೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) (Anti-Terrorist Squad) ಬಂಧಿಸಿದೆ.
ಬಂಧಿತ ಆರೋಪಿಯನ್ನು ಶೈಲೇಂದ್ರ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತ ಅರುಣಾಚಲ ಪ್ರದೇಶದಲ್ಲಿ ಸೇನೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಲಕ್ನೋದಲ್ಲಿ ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಂಧಿತ ಆರೋಪಿ ಸೇನಾ ವಾಹನಗಳು ಇರುವ ಸ್ಥಳ ಮತ್ತು ಚಲನವಲನಕ್ಕೆ ಸಂಬಂಧಿಸಿದ ಸೇನೆಯ ಮಾಹಿತಿಯನ್ನು, ಛಾಯಾಚಿತ್ರಗಳನ್ನು ಐಎಸ್ಐಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ವಿಚಾರಣೆಗಾಗಿ ಲಕ್ನೋದ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಗಿದೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.