ಇಸ್ಲಾಮಾಬಾದ್: 1992ರಲ್ಲಿ ವಿಶ್ವಕಪ್ (World Cup) ಗೆದ್ದಿದ್ದ ಪಾಕ್ (Pakistan) ತಂಡ, ಆ ಬಳಿಕ ಇದೇ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ. ಈ ಬಗ್ಗೆ ತಂಡದ ನಾಯಕ ಬಾಬರ್ ಆಜಂ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೀಸಾ ಸಮಸ್ಯೆ ಬಗೆಹರಿದ ಬಳಿಕ ಬಾಬರ್ ಆಜಂ ನೇತೃತ್ವದ ತಂಡ ಭಾರತಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಅಕ್ಟೋಬರ್ 5ರಿಂದ ಅಹಮದಾಬಾದ್ನಲ್ಲಿ ಆರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಗಳನ್ನಾಡಲು ಪಾಕ್ ಈ ಮೂಲಕ ಸಿದ್ಧವಾಗಿದೆ. 2016ರ ಟಿ20 ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ತಂಡವು ಭಾರತಕ್ಕೆ ಬರುತ್ತಿದೆ. ಅದಕ್ಕೂ ಹಿಂದೆ 2012ರಲ್ಲಿ ಕೊನೆಯ ಏಕದಿನ ಪಂದ್ಯವನ್ನು ಪಾಕ್ ತಂಡವು ಭಾರತದಲ್ಲಿ ಆಡಿತ್ತು. ಅದಾಗಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಪಾಕಿಸ್ತಾನವು ಭಾರತದಲ್ಲಿ ವಿಶ್ವಕಪ್ ಟೂರ್ನಿಯ ಮೂಲಕ ಏಕದಿನ ಪಂದ್ಯವನ್ನು ಆಡುತ್ತಿದೆ.
ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಉಳಿದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವವಿಲ್ಲ. ಪ್ರಸ್ತುತ ಪಾಕಿಸ್ತಾನ ತಂಡದ ಸದಸ್ಯರಾದ ಮೊಹಮ್ಮದ್ ನವಾಜ್ ಮತ್ತು ಅಘಾ ಸಲ್ಮಾನ್ ಮಾತ್ರ ಈ ಹಿಂದೆ ಭಾರತದ ನೆಲದಲ್ಲಿ ಆಡಿದ್ದಾರೆ. ತಂಡದ ನಾಯಕ ಬಾಬರ್ ಸೇರಿದಂತೆ ಉಳಿದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವವಿಲ್ಲ. ಆದರೂ ಈ ಬಾರಿಯ ಪಂದ್ಯದಲ್ಲಿ ಕಪ್ ಗೆಲ್ಲುವ ವಿಶ್ವಾಸವನ್ನು ತೆರೆದಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಾಬರ್, ನಾವೇನೂ ಹೆಚ್ಚು ಒತ್ತಡದಲ್ಲಿ ಆಡುವುದಿಲ್ಲ. ಭಾರತದ ಮೈದಾನ ಹಾಗೂ ಪಿಚ್ಗಳ ಕುರಿತು ನಾವು ಈಗಾಗಲೇ ಸಾಕಷ್ಟು ಅಧ್ಯಯನ ಮಾಡಿದ್ದೇವೆ. ಏಷ್ಯಾದ ಇತರ ದೇಶಗಳಂತೆ ಭಾರತದ ಪಿಚ್ಗಳು ಕೂಡಾ ಇರಲಿವೆ. ಈ ಬಾರಿ ನಾವು ವಿಶ್ವಕಪ್ ಟ್ರೋಫಿಯೊಂದಿಗೆ ಹಿಂತಿರುಗುತ್ತೇವೆ ಎಂಬುದು ನನ್ನ ಅಭಿಪ್ರಾಯ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.