ನನ್ನ ಹೆಸರಲ್ಲಿ ಒಂದು ಮನೆಯೂ ಇಲ್ಲ. ಆದರೆ ಬುಡಕಟ್ಟು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಕೋಟಿಗಟ್ಟಲೆ ಮಹಿಳೆಯರು ಸರ್ಕಾರದ ಯೋಜನೆಗಳ ಅಡಿಯಲ್ಲಿ ನಿರ್ಮಿಸಿದ ಮನೆಗಳನ್ನು ಹೊಂದಿರುವುದರಿಂದ ಈಗ ಲಕ್ಷಾಧಿಪತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರದಿಂದ ಗುಜರಾತ್ಗೆ (Gujarat) ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ಗುಜರಾತ್ನ ಬುಡಕಟ್ಟು ಪ್ರಾಬಲ್ಯವಿರುವ ಛೋಟೌದೇಪುರ್ ಜಿಲ್ಲೆಯ ಬೋಡೆಲಿ ಪಟ್ಟಣದಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ನಿಮ್ಮೊಂದಿಗೆ ಸಾಕಷ್ಟು ಸಮಯ ಕಳೆದಾಗಿನಿಂದ ಬಡವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ಆ ಸಮಸ್ಯೆಗಳನ್ನು ಪರಿಹರಿಸಲು ನಾನು ಸದಾ ಸಿದ್ಧ. ಇಂದು ನನ್ನ ಸರ್ಕಾರಕ್ಕೆ ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿದ ತೃಪ್ತಿ ಇದೆ. ಹಿಂದಿನ ಸರ್ಕಾರಗಳಂತೆ ಬಡವರಿಗೆ ಮನೆ ಎಂಬುದು ನಮಗೆ ಕೇವಲ ಸಂಖ್ಯೆ ಅಲ್ಲ ಎಂದು ಮಾತನಾಡಿದ್ದಾರೆ.
ಬಡವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಅವರಿಗೆ ಗೌರವಧನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದಿವಾಸಿಗಳ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಅದೂ ಕೂಡ ಮಧ್ಯವರ್ತಿಗಳಿಲ್ಲದೆ. ಲಕ್ಷಾಂತರ ಮನೆಗಳನ್ನು ನಿರ್ಮಿಸಿ ಮಹಿಳೆಯರ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ನನ್ನ ಹೆಸರಿನಲ್ಲಿ ಇನ್ನೂ ಮನೆ ಇಲ್ಲದಿದ್ದರೂ, ನನ್ನ ಸರ್ಕಾರ ಲಕ್ಷಗಟ್ಟಲೆ ಹೆಣ್ಣು ಮಕ್ಕಳನ್ನು ಮನೆ ಮಾಲೀಕರನ್ನಾಗಿ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.