ಸಿಂಧ್ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಮಕ್ಕಳಿಗೆ ಪೋಲಿಯೋ ರೋಗ ನಿರೋಧಕ ಲಸಿಕೆ ಕೊಡಿಸಲು ಹಿಂದೇಟು ಹಾಕುವ ಪೋಷಕರನ್ನು ಜೈಲಿಗೆ ಕಳಿಸಲು ಸರ್ಕಾರ ನಿರ್ಧರಿಸಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಹೊಸ ಕಾನೂನು ಜಾರಿಯಾಗಿದೆ. ಪೋಲಿಯೋ ಲಸಿಕೆ ಮಾತ್ರವಲ್ಲ, ಹಲವು ರೀತಿಯ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಂದ ಮಕ್ಕಳು ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಲುವಾಗಿ ನೀಡುವ ಲಸಿಕೆಗಳನ್ನು ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕೊಡಿಸಬೇಕಿದೆ. ಇಲ್ಲವಾದ್ರೆ ಪೋಷಕರು ಜೈಲು ಪಾಲಾಗಲಿದ್ದಾರೆ.
ಪಾಕಿಸ್ತಾನದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈ ಹೊಸ ಕಾನೂನು ಜಾರಿಯಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಪೋಲಿಯೋ ಜೊತೆಯಲ್ಲೇ ಡಿಪ್ಟೀರಿಯಾ, ಟೆಟಾನಸ್, ರುಬೆಲ್ಲಾ ಸೇರಿದಂತೆ ಹಲವು ರೋಗಗಳ ವಿರುದ್ಧ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ನೀಡಲಾಗುವ ಲಸಿಕೆಗಳನ್ನೂ ಪೋಷಕರು ಕಡ್ಡಾಯವಾಗಿ ಕೊಡಿಸಬೇಕಿದೆ.
ಒಂದು ವೇಳೆ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ರೋಗ ನಿರೋಧಕ ಲಸಿಕೆ ಕೊಡಿಸಲು ಹಿಂದೇಟು ಹಾಕಿದರೆ ಅಥವಾ ನಿರಾಕರಿಸಿದರೆ, ಪೋಷಕರನ್ನು ಒಂದು ತಿಂಗಳ ಕಾಲ ಸರ್ಕಾರ ಜೈಲಿಗೆ ಅಟ್ಟಬಹುದಾಗಿದೆ. ಹಾಗೂ 50 ಸಾವಿರ ಪಾಕಿಸ್ತಾನ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಪಾಕಿಸ್ತಾನದ 50 ಸಾವಿರ ರೂಪಾಯಿಗೆ ಭಾರತದ ರೂಪಾಯಿ ಮೌಲ್ಯ 13,487 ರೂಪಾಯಿ ಆಗುತ್ತದೆ.