ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ (Women Reservation Bill) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಮಸೂದೆಗೆ ಕಾನೂನು ರೂಪ ಸಿಕ್ಕಿದ್ದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ನೀಡಲಿದೆ. ಮುಂದಿನ ಜಾತಿಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡಣೆಯಾಗಲಿದ್ದು, ಆ ಬಳಿಕವಷ್ಟೆ ಈ ಕಾನೂನು ಜಾರಿಗೆ ಬರಲಿದೆ ಎಂದು ಗೆಜೆಟ್ನಲ್ಲಿ ತಿಳಿಸಿದೆ
ಸೆಪ್ಟೆಂಬರ್ 20 ರಂದು ಮಸೂದೆಯನ್ನು ಅಂಗೀಕರಿಸಲಾಯಿತು. 454 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದರು. ಮಸೂದೆ ವಿರುದ್ಧ ಇಬ್ಬರು ಮತ ಚಲಾಯಿಸಿದ್ದರು. ಸೆಪ್ಟೆಂಬರ್ 21 ರಂದು, ನಾರಿ ಶಕ್ತಿ ವಂದನ್ ಅಧಿನಿಯಮವನ್ನು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi) ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು. ಹೊಸ ಸಂಸತ್ ಭವನದಲ್ಲಿ ಮಂಡನೆಯಾದ ಈ ಮೊದಲ ಮಸೂದೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಯಾವುದೇ ತಕರಾರು ಇಲ್ಲದೇ ಇದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತ್ತು.
ಮಸೂದೆಯ ಚರ್ಚೆಯ ಸಮಯದಲ್ಲಿ ಜಾತಿ ಗಣತಿ, ಕ್ಷೇತ್ರ ಪುನರ್ ವಿಂಗಡಣೆ ವರೆಗೂ ಕಾಯದೇ ಶೀಘ್ರವಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ವಿಪಕ್ಷಗಳು ಮನವಿ ಮಾಡಿದ್ದವು. ಆದರೆ ಇದಕ್ಕೆ ಉತ್ತರಿಸಿದ್ದ ಸರ್ಕಾರ ಆರ್ಟಿಕಲ್ 334 ಎ ಪ್ರಕಾರ ಜನಗಣತಿ ಬಳಿಕ ಕ್ಷೇತ್ರ ಪುನರ್ ವಿಂಗಡನೆಯಾಗಲಿದ್ದು, ಬಳಿಕವೇ ಕಾನೂನು ಜಾರಿಗೆ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿತ್ತು.