ಪಾಕಿಸ್ತಾನ: ನಿಮ್ಮ ದೇಶದಿಂದ ಭಿಕ್ಷುಕರನ್ನು ಕಳಿಸಬೇಡಿ ಅಂತಾ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಚಾಟಿ ಬೀಸಿದ ಬೆನ್ನಲ್ಲೇ ಪಾಕಿಸ್ತಾನ ಎಚ್ಚೆತ್ತಿದೆ. ಹಜ್ ಯಾತ್ರೆ ನೆಪದಲ್ಲಿ ಸೌದಿ ಅರೇಬಿಯಾಗೆ ಹೋಗಿ ಭಿಕ್ಷೆ ಬೇಡುವವರಿಗೆ ಕಡಿವಾಣ ಹಾಕಲು ಮುಂದಾಗಿದೆ. ಪಾಕಿಸ್ತಾದಿಂದ ಸೌದಿ ಅರೇಬಿಯಾಗೆ ಹೊರಡಲು ವಿಮಾನ ಹತ್ತುತ್ತಿದ್ದ ವೇಳೆ 16 ಮಂದಿಯನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ನಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದಲ್ಲೇ 16 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಬಂಧಿತರು ಹಜ್ ಯಾತ್ರಿಕರ ಸೋಗಿನಲ್ಲಿ ಸೌದಿ ಅರೇಬಿಯಾದ ವೀಸಾ ಪಡೆದಿದ್ದರು. ಗಲ್ಫ್ ರಾಷ್ಟ್ರದಲ್ಲಿ ಭಿಕ್ಷೆ ಬೇಡೋದೇ ಇವರ ಉದ್ದೇಶ ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ 16 ಮಂದಿಯ ಪೈಕಿ 11 ಮಹಿಳೆಯರು, ನಾಲ್ವರು ಪುರುಷರು ಹಾಗೂ 1 ಮಗು ಕೂಡಾ ಸೇರಿದೆ.
ಇವರೆಲ್ಲರೂ ಉಮ್ರಾ ವೀಸಾದಡಿ ಪಾಕಿಸ್ತಾನದಿಂದ ಸೌದಿ ಅರೇಬಿಯಾಗೆ ಹೊರಟಿದ್ದರು.ಇಸ್ಲಾಮಿಕ್ ಧಾರ್ಮಿಕ ಯಾತ್ರಿಕರಿಗೆ ಉಮ್ರಾ ವೀಸಾ ನೀಡಲಾಗುತ್ತದೆ. ಈ ವೀಸಾ ಅಡಿ ಯಾತ್ರಿಕರು ಮುಸ್ಲಿಮರ ಪವಿತ್ರ ಧಾರ್ಮಿಕ ತಾಣ ಮೆಕ್ಕಾಗೆ ಭೇಟಿ ನೀಡಬಹುದಾಗಿದೆ. ವರ್ಷದ ಯಾವುದೇ ಸಮಯದಲ್ಲೂ ಹಜ್ ಯಾತ್ರೆಗೆ ತೆರಳಲು ಉಮ್ರಾ ವೀಸಾ ಪಡೆಯಬಹುದಾಗಿದೆ. ಇದೀಗ ಆರ್ಥಿಕ ಸಂಕಷ್ಟದಲ್ಲಿ ಇರುವ ಪಾಕಿಸ್ತಾನದಲ್ಲಿ ಜನರು ಉಮ್ರಾ ವೀಸಾವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ವೀಸಾದಡಿ ಸೌದಿ ಅರೇಬಿಯಾಗೆ ಹೋಗಿ ಅಲ್ಲಿ ಭಿಕ್ಷೆ ಬೇಡಿ ಹಣ ಗಳಿಸುತ್ತಿದ್ದಾರೆ.