ಮುಂಬೈ : ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್ ಹೋಟೆಲ್ನ ಬಾತ್ಟಬ್ನಲ್ಲಿ ಮುಳುಗಿ ಅವರು ಕೊನೆಯುಸಿರು ಎಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತಗೊಳಗಾಗಿತ್ತು.
ಆ ಘಟನೆ ನಡೆದು ಇಷ್ಟು ವರ್ಷಗಳು ಕಳೆದ ಬಳಿಕ ಮೊದಲ ಬಾರಿಗೆ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಮೌನ ಮುರಿದಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಅವರು ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಾವು ಸುದೀರ್ಘವಾದ ವಿಚಾರಣೆಗೆ ಒಳಪಟ್ಟಿರುವುದಾಗಿ ಬೋನಿ ಕಪೂರ್ ತಿಳಿಸಿದ್ದಾರೆ. ಅಲ್ಲದೇ ಶ್ರೀದೇವಿಯ ಸಾವಿಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಶ್ರೀದೇವಿ ಪಾಲಿಸುತ್ತಿದ್ದ ಡಯೆಟ್ನಿಂದಾಗಿ ಈ ಸಾವು ಸಂಭವಿಸಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. ಶ್ರೀದೇವಿ ಯಾವಾಗಲೂ ಉಪವಾಸ ಮಾಡುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಬೇಕು, ದೇಹದ ಶೇಪ್ ಚೆನ್ನಾಗಿ ಇರಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಡಯೆಟ್ ಮಾಡುತ್ತಿದ್ದರು.
ನನ್ನನ್ನು ಮದುವೆ ಆದಾಗಿನಿಂದ ಹಲವು ಬಾರಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಲೋ ಬಿಪಿ ಇದೆ ಅಂತ ವೈದ್ಯರು ಹೇಳುತ್ತಲೇ ಇದ್ದರು ಎಂದಿದ್ದಾರೆ ಬೋನಿ ಕಪೂರ್.