ದುಬೈ : ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದೆ. ಹಜ್ ಯಾತ್ರಿಕರ ಸೋಗಿನಲ್ಲಿ ಭಿಕ್ಷುಕರನ್ನು, ಜೇಬುಗಳ್ಳರನ್ನು ಇಲ್ಲಿಗೆ ಕಳುಹಿಸಬೇಡಿ, ನಮ್ಮ ಜೈಲುಗಳು ತುಂಬಿ ತುಳುಕುತ್ತಿವೆ ಎಂದು ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಮುಖಕ್ಕೆ ಹೊಡೆದಂತೆ ಹೇಳಿದೆ. ಅದಲ್ಲದೇ ಹಜ್ ಯಾತ್ರಿಕರ ಆಯ್ಕೆಯಲ್ಲಿ ಸ್ವಲ್ಪ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಈ ವಿಚಾರವನ್ನು ಸೌದಿ ಅರೇಬಿಯಾದ ಅಧಿಕಾರಿಗಳು ಎತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಮ್ಮ ದೇಶದ ಭಿಕ್ಷುಕರನ್ನು ಯಾತ್ರಿಕರ ಸೋಗಿನಲ್ಲಿ ನಮ್ಮ ದೇಶಕ್ಕೆ ಕಳುಹಿಸಬೇಡಿ ಎಂದು ಅರಬ್ ರಾಷ್ಟ್ರ ಪಾಕಿಸ್ತಾನಕ್ಕೆ ಹೇಳಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಕೂಡ ಪಾಕ್ ಹೆಚ್ಚಿನ ಭಿಕ್ಷುಕರು ಹಜ್ ಯಾತ್ರೆ ನೆಪದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಪಾಕ್ನ ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಝೀಶನ್ ಖಾನ್ಜಾದಾ ಅವರು ತಮ್ಮ ದೇಶದ ವಲಸಿಗರ ಬಗ್ಗೆ ಹಲವಾರು ಆಘಾತಕಾರಿ ಅಂಕಿ ಅಂಶಗಳನ್ನು ನೀಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ವಿದೇಶದಲ್ಲಿರುವ ಬಹಳಷ್ಟು ಪಾಕಿಸ್ತಾನಿ ವಲಸಿಗರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದಿರುವ ಖಾನ್ಜಾದಾ, ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಪ್ರಜೆಗಳು ಜೈಲಿನಲ್ಲಿರುವುದರಿಂದ ಜೈಲುಗಳು ತುಂಬಿ ತುಳುಕುತ್ತಿವೆ ಎಂದು ಇರಾಕ್ ಹಾಗೂ ಸೌದಿ ಅರೇಬಿಯಾದ ರಾಯಭಾರಿಗಳು ತಮಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.