ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೆಬಲ್ ಮೋನಿಕಾ ಯಾದವ್ ಪ್ರಕರಣವನ್ನು 2 ವರ್ಷಗಳ ಬಳಿಕ ದಿಲ್ಲಿ ಪೊಲೀಸರು ಭೇದಿಸಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ ಸುರೇಂದ್ರ ಸಿಂಗ್ ರಾಣಾ ಎಂಬಾತ ಮೋನಿಕಾ ಅವರನ್ನು ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ ಸುರೇಂದ್ರ ಸಿಂಗ್ ರಾಣಾ ಹಾಗೂ ಆತನಿಗೆ ನೆರವು ನೀಡಿದ್ದ ಓರ್ವ ಸ್ನೇಹಿತ ಹಾಗೂ ಸುರೇಂದ್ರ ಸಿಂಗ್ನ ಬಾವನನ್ನೂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಾನ್ಸ್ಟೆಬಲ್ ಸುರೇಂದ್ರ ಸಿಂಗ್ ರಾಣಾ 28 ವರ್ಷ ವಯಸ್ಸಿನ ಪೊಲೀಸ್ ಕಾನ್ಸ್ಟೆಬಲ್ ಮೋನಿಕಾ ಯಾದವ್ ಅವರ ಕತ್ತು ಹಿಸುಕಿ ಕೊಲೆ ಮಾಡಿ ಉತ್ತರ ದಿಲ್ಲಿಯಲ್ಲಿ ಚರಂಡಿಗೆ ಎಸೆದಿದ್ದ ಎಂದು ತಿಳಿದು ಬಂದಿದೆ. ಆರೋಪಿ ಸುರೇಂದ್ರ ಸಿಂಗ್ ರಾಣಾ ನೀಡಿದ ಮಾಹಿತಿ ಆಧರಿಸಿ ಮೋರಿಯಲ್ಲಿ ಹುಡುಕಾಟ ನಡೆಸಿದ ಪೊಲೀಸರು, ಅಸ್ಥಿಪಂಜರವೊಂದನ್ನು ಪತ್ತೆ ಮಾಡಿದ್ದು, ಅದನ್ನು ಡಿಎನ್ಎ ಪರೀಕ್ಷೆಗೆ ರವಾನಿಸಿದ್ದಾರೆ. ರಾಣಾ ಹಾಗೂ ಮೋನಿಕಾ ಪೊಲೀಸ್ ತರಬೇತಿ ಶಿಬಿರದಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಮೋನಿಕಾ ಅವರನ್ನು ರಾಣಾ ಮದುವೆ ಆಗಬೇಕು ಎಂದು ಬಯಸಿದ್ದ.
ಆದರೆ, ಆಕೆ ಪದೇ ಪದೇ ಮದುವೆಗೆ ನಿರಾಕರಿಸುತ್ತಿದ್ದ ಕಾರಣ ಸಿಟ್ಟಿಗೆದ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. 2 ವರ್ಷಗಳ ಹಿಂದೆ ದಿಲ್ಲಿಯ ಅಲಿಪುರದಲ್ಲಿನ ತನ್ನ ಮನೆಗೆ ಕರೆದೊಯ್ದಿದ್ದ ಆರೋಪಿ, ಅಲ್ಲಿಯೇ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಬಳಿಕ ಮೋನಿಕಾ ಅವರ ಕುಟುಂಬಸ್ಥರಿಗೆ ಆಕೆ ಇನ್ನೂ ಬದುಕಿದ್ದಾಳೆ ಎಂದು ನಂಬಿಸಿದ್ದ ರಾಣಾ, ಮೋನಿಕಾ ಕುಟುಂಬಸ್ಥರಿಗೆ ದಾರಿ ತಪ್ಪಿಸಿದ್ದ.ಇನ್ನು ಆರೋಪಿ ರಾಣಾಗೆ ಆತನ ಬಾವ ರವೀನ್ ಎಂಬಾತ ನೆರವು ನೀಡಿದ್ದ. ಮತ್ತೊಬ್ಬ ಆರೋಪಿ ರಾಜ್ಪಾಲ್, ರವೀನ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.