ಲಕ್ನೋ: ಇಲ್ಲಿನ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಒಂಬತ್ತು ವರ್ಷದ ಬಾಲಕ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ದಾಖಲು ಮಾಡಲಾಗಿದ್ದು, ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮವನ್ನು ನಿರ್ಧರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಜೊತೆ ಚರ್ಚೆ ಮಾಡಲಾಗುತ್ತಿದೆ’ ಎಂದು ಎಸ್ಎಚ್ಒ ಅತುಲ್ ಕುಮಾರ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಪಿಜಿಐ ಬಳಿಯ ಅರ್ಜುನ್ಗಂಜ್ನ ಸಿಗ್ನಲ್ಗಳಲ್ಲಿ ಹುಡುಗಿ ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದರೆ, ಹುಡುಗ ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದ ಬಳಿ ವಾಸ ಮಾಡುತ್ತಿದ್ದಾನೆ. ಅದಲ್ಲದೆ, ಬೀದಿಗಳಲ್ಲಿ ಬಲೂನ್ಗಳನ್ನು ಮಾರಿ ಜೀವನ ಸಾಗಿಸುತ್ತಿದ್ದಾನೆ. ಇಬ್ಬರೂ ಪರಸ್ಪರ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಆ ಪ್ರದೇಶದಲ್ಲಿ ಆಯೋಜಿಸಿದ್ದ ಜಾತ್ರೆಗೆ ಇಬ್ಬರು ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಂತರ, ಹುಡುಗ ಬಾಲಕಿಯನ್ನು ಏಕಾನಾ ಕ್ರೀಡಾಂಗಣದ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ” ಎಂದು ಎಸ್ಎಚ್ಒ ಮಾಹಿತಿ ನೀಡಿದ್ದಾರೆ. ಹುಡುಗಿ ಈ ವಿಚಾರವನ್ನು ತನ್ನ ತಂದೆಗೆ ತಿಳಿಸಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಘಟನೆಯ ನಂತರ ಆರೋಪಿ ಬಾಲಕ ಓಡಿ ಹೋಗಿದ್ದಾನೆ. ಆದರೆ, ಆತನ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.