ನವದೆಹಲಿ: 2023ರ ವಿಶ್ವಕಪ್ ಕ್ರಿಕೆಟ್ನ (World Cup) ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ (Team India) ಭಾರೀ ಆಘಾತವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್ಗೆ (Shubman Gill) ಡೆಂಗ್ಯೂ ಖಚಿತವಾಗಿದೆ. ಇದರಿಂದಾಗಿ ಅವರು ಭಾನುವಾರ (ಅ.8) ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ.
ಟೀಂ ಇಂಡಿಯಾ ವಿಶ್ವಕಪ್ ದಂಡಯಾತ್ರೆಯನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಕ್ಟೋಬರ್ 8 ರಂದು ಪ್ರಾರಂಭಿಸಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆದರೆ ಪಂದ್ಯಕ್ಕೂ ಮುನ್ನ ಶುಭಮನ್ ಗಿಲ್ ಅನಾರೋಗ್ಯದಿಂದ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಟೀಂ ಮ್ಯಾನೇಜ್ಮೆಂಟ್ ಗಿಲ್ ಮೇಲೆ ತೀವ್ರ ನಿಗಾ ಇಟ್ಟಿದೆ. ಇಂದು ಗಿಲ್ಗೆ ಮತ್ತೊಂದು ಪರೀಕ್ಷೆ ನಡೆಯಲಿದೆ. ಇದರ ನಂತರ ಅವರ ಆಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ಗಿಲ್ ಈ ಪಂದ್ಯವನ್ನು ಆಡದಿದ್ದರೆ, ರೋಹಿತ್ ಶರ್ಮಾ ಅವರೊಂದಿಗೆ ಇಶಾನ್ ಕಿಶನ್ ಅಥವಾ ಕೆಎಲ್ ರಾಹುಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.