ಮುಂಬೈ: ಭಾರತ್ ಜೋಡೋ ಯಾತ್ರೆಯ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ಮುಂದೊಂದು ದಿನ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂಡಿಯಾ ಟುಡೆ ಕಾಂಕ್ಲೇವ್ನಲ್ಲಿ ಮಾತನಾಡಿದ ಶರದ್ ಪವಾರ್, ಸಾಮಾಜಿಕ ಮಾಧ್ಯಮ ಟ್ರೋಲ್ಗಳು ಹಾಗೂ ಇತರೆ ಟೀಕಾಕಾರರ ಗುರಿಯಾಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ಈಗ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. “ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳಿಕ ಅವರನ್ನು ಗಂಭೀರವಾಗಿ ನೋಡಲಾಗುತ್ತಿದೆ. ಅವರು ದೇಶಕ್ಕೆ ಮುಂದೆ ಒಂದು ದಿನ ನಾಯಕತ್ವ ಒದಗಿಸಲಿದ್ದಾರೆ” ಎಂದು ಪವಾರ್ ಹೇಳಿದರು.
ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ ಶರದ್ ಪವಾರ್, ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದ ಬಂಡಾಯ ಬಣದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ನಿರಾಕರಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಬೇರೆಯವರಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
“ಬಿಜೆಪಿ ಜತೆ ಹೋದವರಿಗೂ ಎನ್ಸಿಪಿಗೂ ಸಂಬಂಧವಿಲ್ಲ. ತನಿಖಾ ಸಂಸ್ಥೆಗಳ ಬೆದರಿಕೆಯಿಂದಾಗಿ ಅವರು ಅಲ್ಲಿಗೆ ಜಿಗಿದಿದ್ದಾರೆ. ಹೀಗೆ ಪಕ್ಷ ಬದಲಾವಣೆ ಮಾಡಿದವರು ಸರ್ಕಾರದಲ್ಲಿ ಹಾಗೂ ಸರ್ಕಾರದ ಹೊರಗೆ ಅನೇಕ ಸ್ಥಾನಗಳನ್ನು ಆನಂದಿಸುತ್ತಿದ್ದಾರೆ. ಆದರೆ ಅವರು ಪಕ್ಷಗಳನ್ನು ತೊರೆಯಲು ಕಾರಣ ತನಿಖಾ ಸಂಸ್ಥೆಗಳ ಬೆದರಿಕೆ” ಎಂದು ಆರೋಪಿಸಿದರು.