ವಾಷಿಂಗ್ಟನ್: ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ಉದ್ಘಾಟನೆಗೊಂಡಿದೆ. BAPS ಸ್ವಾಮಿನಾರಾಯಣ ಅಕ್ಷರಧಾಮ (BAPS Swaminarayan Akshardham) ದೇವಾಲಯವು ಅಮೆರಿಕದ (America) ನ್ಯೂಜೆರ್ಸಿಯಲ್ಲಿ ಭಾನುವಾರ ಭಕ್ತಾದಿಗಳಿಗೆ ಬಾಗಿಲು ತೆರೆಯಿತು.
ನ್ಯೂಜೆರ್ಸಿಯ (New Jersey) ರಾಬಿನ್ಸ್ವಿಲ್ಲೆ ನಗರದಲ್ಲಿರುವ ಈ ದೇವಾಲಯವು ಆಧುನಿಕ ಯುಗದಲ್ಲಿ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ‘ವಿಶ್ವದಾದ್ಯಂತ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಧ್ಯಾತ್ಮಿಕ ಮಹತ್ವದ ಸಂದರ್ಭವಾಗಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
ಈ ದೇವಾಲಯವನ್ನು ಇಟಲಿ ಮತ್ತು ಬಲ್ಗೇರಿಯಾದ ವಿಧದ ಅಮೃತಶಿಲೆಯಿಂದ ರಚಿಸಲಾಗಿದೆ. ಈ ವಾಸ್ತುಶಿಲ್ಪದ ದೇವಾಲಯವು ವಿಶಾಲವಾದ 126 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ದೇವಾಲಯದ ಗೋಡೆಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಬ್ರಹಾಂ ಲಿಂಕನ್ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ಪ್ರತಿರೂಪವನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಸ್ವಯಂಸೇವಕ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಧಾರ್ಮಿಕ ವಿದ್ವಾಂಸ ಯೋಗಿ ತ್ರಿವೇದಿ ತಿಳಿಸಿದ್ದಾರೆ.