ಟೆಲ್ ಅವೀವ್: ಹಮಾಸ್ ಉಗ್ರರ (Hamas) ದಾಳಿಗೆ ಕ್ರೂರವಾಗಿ ಸಾವಿಗೀಡಾದ ಮಕ್ಕಳ ಚಿತ್ರಗಳನ್ನು ಇಸ್ರೇಲ್ (Israel) ಪ್ರಧಾನಿ ಕಚೇರಿ ಎಕ್ಸ್ನಲ್ಲಿ ಹಂಚಿಕೊಂಡಿದೆ. ಅಲ್ಲದೇ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಈ ಚಿತ್ರಗಳನ್ನು ತೋರಿಸಿ ಭೀಕರತೆಯನ್ನು ಹೇಳಿಕೊಂಡಿದ್ದಾರೆ.
ಈ ಚಿತ್ರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಇಸ್ರೇಲ್ ಪ್ರಧಾನಿ ಕಚೇರಿ, ಎಚ್ಚರಿಕೆ, ಇವು ಹಮಾಸ್ ರಾಕ್ಷಸರಿಂದ ಕೊಲ್ಲಲ್ಪಟ್ಟ ಮತ್ತು ಸುಟ್ಟುಹೋದ ಶಿಶುಗಳ ಭಯಾನಕ ಫೋಟೋಗಳಾಗಿವೆ. ಹಮಾಸ್ ಅಮಾನವೀಯವಾಗಿದೆ. ಹಮಾಸ್ ಐಸಿಸ್ ಆಗಿದೆ ಎಂದು ಬರೆದುಕೊಂಡಿದೆ.
ಈ ಯುದ್ಧದಲ್ಲಿ ನಡೆಯುತ್ತಿರುವ ಹಿಂಸಾಚಾರ, ರಕ್ತಪಾತ ಇಸ್ರೇಲ್ ಜನರ ಮೇಲೆ ಮಾತ್ರವಲ್ಲ. ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೂ ನಡೆಯುತ್ತಿದೆ. ಸುಮಾರು 40 ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಹಲವಾರು ಮಹಿಳೆಯರ ಮೇಲೆ ಉಗ್ರರು ಅತ್ಯಾಚಾರ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯುದ್ಧ ಮುಂದುವರೆದಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.