ವಾಷಿಂಗ್ಟನ್: ಭಯೋತ್ಪಾದಕರು (Terrorists) ಮಕ್ಕಳ ಶಿರಚ್ಛೇದನ (Beheading) ಮಾಡುವ ಚಿತ್ರಗಳನ್ನು ನಾನು ಎಂದಿಗೂ ನೋಡುತ್ತೇನೆ ಎಂದುಕೊಂಡಿರಲಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden) ತಿಳಿಸಿದ್ದಾರೆ. ಇಸ್ರೇಲ್ನಲ್ಲಿ (Israel) ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿದ ಬೈಡನ್, ಈ ದಾಳಿಯು ಕ್ರೂರ ಕ್ರೌರ್ಯದ ಅಭಿಯಾನವಾಗಿದೆ. ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡಿದ ಚಿತ್ರಗಳನ್ನು ನಾನು ಖಚಿತಪಡಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಬೈಡನ್ ಹೇಳಿದ್ದಾರೆ.
ಹಮಾಸ್ (Hamas) ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಅದನ್ನು ಮಾರಣಾಂತಿಕ ದಿನ ಎಂದು ಬೈಡನ್ ಕರೆದಿದ್ದಾರೆ. ಹಮಾಸ್ ಭಯೋತ್ಪಾದಕ ದಾಳಿ ಯಹೂದಿ ಜನರ ವಿರುದ್ಧ ನಡೆಸಲಾಗಿದ್ದು, ಸಹಸ್ರಾರು ಯಹೂದಿಗಳ ನರಮೇಧದ ನೋವಿನ ನೆನಪುಗಳನ್ನು ಮರಳಿ ತಂದಿದೆ ಎಂದು ಹೇಳಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಲ್ಲಿಯವರೆಗೆ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಅದರಲ್ಲಿ ಕನಿಷ್ಠ 22 ಅಮೆರಿಕನ್ನರು ಸೇರಿದ್ದಾರೆ. ನಾವು ಇಸ್ರೇಲ್ ನಾಯಕರು, ಪ್ರಪಂಚದಾದ್ಯಂತ ಹಲವಾರು ನಾಯಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕ್ಷಣದಲ್ಲಿ, ನಾವು ಸ್ಫಟಿಕದಂತೆ ಸ್ಪಷ್ಟವಾಗಿರಬೇಕು. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಹಾಗೂ ಕ್ಷಮೆ ಇಲ್ಲ. ಇಸ್ರೇಲ್ನ ಭದ್ರತೆ ಮತ್ತು ಸುರಕ್ಷತೆಗೆ ಇರುವ ನನ್ನ ಬದ್ಧತೆಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಅಮೆರಿಕ ಇಸ್ರೇಲ್ಗೆ ಬೆನ್ನಾಗಿ ನಿಲ್ಲುತ್ತಿದೆ. ನಾವು ಇಂದು ಮಾತ್ರವಲ್ಲ, ಅದರಾಚೆಗೂ ಈ ಬಗ್ಗೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಹೇಳಿದರು.