2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ವೈಫಲ್ಯ ಕಂಡಿರುವ ಪಾಕಿಸ್ತಾನದ ನಾಯಕ ಬಾಬರ್ ಆಝಮ್ ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ ಅವರ ಹಂತಕ್ಕೆ ಎಂದಿಗೂ ತಲುಪಲು ಆಗುವುದಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ಅ.10) ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 345 ರನ್ ಗುರಿ ಹಿಂಬಾಲಿಸಿದ ಪಾಕ್ ಪರ ಬಾಬರ್ ಆಝಮ್ ದೊಡ್ಡ ಮೊತ್ತ ಗಳಿಸಿ ತಂಡವನ್ನು ಗೆಲ್ಲಿಸುತ್ತಾರೆ ಎಂದು ಅಭಿಮಾನಿಗಳು ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದರು. ಆದರೆ ಮಧುಶಂಕ ಎಸೆದ ವೈಡ್ ಆಗುತ್ತಿದ್ದ ಬಾಲ್ ಅನ್ನು ಕೆಣಕಿದ ಬಾಬರ್ ಆಝಮ್, ವಿಕೆಟ್ ಕೀಪರ್ ಸಾದೀರ ಸಮರವಿಕ್ರಮ ಹಿಡಿದ ಕ್ಯಾಚ್ಗೆ ಬಲಿಯಾಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಆಝಮ್ 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯ ಅಂಗವಾಗಿ ನಡೆದ ಪೂರ್ವ ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪಂದ್ಯಗಳಲ್ಲಿ ಕ್ರಮವಾಗಿ 80 ಮತ್ತು 90 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ ವಿಶ್ವಕಪ್ನ ರೌಂಡ್ ರಾಬಿನ್ ಪಂದ್ಯಗಳಲ್ಲಿ ಅದೇ ಪ್ರದರ್ಶನ ತೋರುವಲ್ಲಿ ಎಡವಿರುವ ಬಾಬರ್ ಆಝಮ್, ಆಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರೆ, ಶ್ರೀಲಂಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ 10 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಪಾಕ್ ನಾಯಕನ ವೈಫಲ್ಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.