ತಿರುವನಂತಪುರಂ: ವಿಮಾನನಿಲ್ದಾಣದಲ್ಲಿ (Airport) 60ಕ್ಕೂ ಹೆಚ್ಚು ಬಾರಿ ಚಿನ್ನ ಕಳ್ಳಸಾಗಾಣೆ ದಾರರಿಗೆ ಸಹಾಯ ಮಾಡಲು ಲಂಚ (Bribe) ಪಡೆದ ಆರೋಪದ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಯನ್ನು ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ನವೀನ್ ಕುಮಾರ್ ಎಂದು ತಿಳಿದು ಬಂದಿದೆ. ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದವರಿಗೆ ಸಹಾಯ ಮಾಡಲು ಯತ್ನಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಮಲಪ್ಪುರಂ ಪೊಲೀಸರು ಆತನ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಕಸ್ಟಮ್ಸ್ ಅಧಿಕಾರಿ ಮತ್ತು ಲಗೇಜ್ ನಿರ್ವಹಿಸುವ ಹೊರಗುತ್ತಿಗೆ ಉದ್ಯೋಗಿ ಶರಫಲಿ ಎಂಬವನ ಸಹಾಯದಿಂದ ಸುಮಾರು 60 ಬಾರಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡಿದ್ದಾನೆ. ಪ್ರತಿ ಬಾರಿ 60,000 ರೂ.ಗಳನ್ನು ಲಂಚವಾಗಿ ಪಡೆದಿದ್ದಾನೆ. ಅಲ್ಲದೇ ಆರೋಪಿ ಈ ವಿಚಾರವಾಗಿ ಸಾಗಾಣಿಕೆದಾರರೊಂದಿಗೆ ಸಂಪರ್ಕಿಸಲು ಮೂರು ಸಿಮ್ಗಳನ್ನು ಬಳಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಸಿಐಎಸ್ಎಫ್ ಮಹಾನಿರ್ದೇಶಕರು ಆರೋಪಿ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅಕ್ಟೋಬರ್ 5ರಂದು ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ತನಿಖೆ ವೇಳೆ ಅಧಿಕಾರಿಯ ಪಾತ್ರ ಬಯಲಾಗಿದೆ.