ಒಟ್ಟಾವಾ: ಇತ್ತೀಚೆಗೆ ಭಾರತ (India) ಹಾಗೂ ಕೆನಡಾದ (Canada) ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದಿದ್ದು, ಇದನ್ನು ಸರಿಪಡಿಸುವ ಪ್ರಯತ್ನದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಹಿಂದೂಗಳ ಹಬ್ಬ ನವರಾತ್ರಿಗೆ (Navratri) ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಟ್ರುಡೋ ಕೆಲ ವಾರಗಳ ಹಿಂದೆ ಆರೋಪಿಸಿದ್ದರು.
ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದ್ದಲ್ಲದೇ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಲು ಕಾರಣವಾಯಿತು. ಇದೀಗ ಟ್ರುಡೋ ಎರಡೂ ದೇಶಗಳ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಹಿಂದೂಗಳ ಹಬ್ಬ ನವರಾತ್ರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ನವರಾತ್ರಿಯ ಶುಭಾಶಯಗಳು. ನಾನು ಹಿಂದೂ ಸಮುದಾಯದ ಸದಸ್ಯರಿಗೆ ಹಾಗೂ ಈ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಆತ್ಮೀಯತೆಯ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.
ಟ್ರುಡೋ ಹಿಂದೂ ಸಮುದಾಯದಲ್ಲಿ ನವರಾತ್ರಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ವಿಜಯ ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಟ್ರುಡೋ ಹಿಂದೂ ಸಂಸ್ಕೃತಿಯ ಬಗ್ಗೆ ಅರಿಯಲು ಹಾಗೂ ಕೆನಡಾಗೆ ಈ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಲು ಈ ಹಬ್ಬವನ್ನು ಗುರುತಿಸಿದ್ದಾರೆ. ಕೆನಡಾದ ಪ್ರಧಾನಿ ಬಿಡುಗಡೆ ಮಾಡಿದ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಮುಂದಿನ 9 ರಾತ್ರಿ ಹಾಗೂ 10 ಹಗಲುಗಳಲ್ಲಿ ಕೆನಡಾ ಮತ್ತು ಪ್ರಪಂಚಾದ್ಯಂತ ಹಿಂದೂ ಸಮುದಾಯದ ಸದಸ್ಯರು ನವರಾತ್ರಿಯನ್ನು ಆಚರಿಸಲು ಒಟ್ಟಾಗಲಿದ್ದಾರೆ ಎಂದಿದ್ದಾರೆ.