ಅಹಮದಾಬಾದ್: ಬಾಬರ್ ಆಝಮ್ ಸಾರಥ್ಯದ ಪಾಕಿಸ್ತಾನ ತಂಡ ಆತಿಥೇಯ ಟೀಮ್ ಇಂಡಿಯಾ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ 7 ವಿಕೆಟ್ಗಳ ಹೀನಾಯ ಸೋಲುಂಡಿತು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಡೈರೆಕ್ಟರ್ ಮಿಕಿ ಆರ್ಥರ್, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡಕ್ಕೆ ಸೂಕ್ತ ಬೆಂಬಲ ಸಿಗದೇ ಇರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಶ್ರಯದ ಟೂರ್ನಿ ಇದಾಗಿದೆ, ಆದರೆ ಇದನ್ನು ಬಿಸಿಸಿಐನ ಕಾರ್ಯಕ್ರಮದ ರೀತಿ ನಡೆಸಲಾಗಿದೆ ಎಂದು ಆರ್ಥರ್ ವಾಗ್ದಾಳಿ ನಡೆಸಿದ್ದಾರೆ.
“ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರ ಬೆಂಬಲ ಭಾರತ ತಂಡದ ಕಡೆಗಿತ್ತು. ಇದರ ಪರಿಣಾಮ ಪಾಕಿಸ್ತಾನ ತಂಡದ ಮೇಲೆ ಬೀರಲಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಇದು ವಿಶ್ವಕಪ್ ಪಂದ್ಯವಲ್ಲ, ದ್ವಿಪಕ್ಷೀಯ ಸರಣಿಯ ಪಂದ್ಯ ಎಂಬಂತೆ ಭಾಸವಾಯಿತು. ಇದು ಐಸಿಸಿ ಟೂರ್ನಿಯಲ್ಲ, ಬಿಸಿಸಿಐನ ಟೂರ್ನಿ ಎಂಬ ಅನುಭವವಾಯಿತು. ಕ್ರೀಡಾಂಗಣದ ಸ್ಪೀಕರ್ಗಳಲ್ಲಿ ನನಗೆ ದಿಲ್ ದಿಲ್ ಪಾಕಿಸ್ತಾನ್ ಹಾಡು ಹೆಚ್ಚಾಗಿ ಕೇಳಿಸಲೇ ಇಲ್ಲ. ಇದು ತಂಡದ ಪ್ರದರ್ಶನದ ಮೇಲೆಯೂ ಪರಿಣಾಮ ಬೀರಿದೆ ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಥರ್ ಟೀಕೆ ಮಾಡಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ (ಅ.14) ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಕ್ರೀಡಾಂಗಣದಲ್ಲಿ ಬಹುತೇಕ ಟೀಮ್ ಇಂಡಿಯಾ ಅಭಿಮಾನಿಗಳು ತುಂಬಿದ್ದ ಕಾರಣ ಸ್ಟೇಡಿಯಂ ಸಂಪೂರ್ಣ ನೀಲಿಮಯವಾಗಿತ್ತು. ಇನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಸರಿಯಾಗಿ ವೀಸಾ ಸಿಗದ ಕಾರಣ ಪಾಕ್ ಅಭಿಮಾನಿಗಳ ಸಂಖ್ಯೆ ಬಹಳಾ ಕಡಿಮೆಯಿತ್ತು. ಇದರ ಬೆನ್ನಲ್ಲೇ ಮಿಕಿ ಆರ್ಥರ್ ಈ ಹೇಳಿಕೆ ನೀಡಿದ್ದಾರೆ.