ನ್ಯೂಯಾರ್ಕ್: ಇಸ್ರೇಲ್- ಪ್ಯಾಲೆಸ್ತೀನ್ (Isreal Palestine) ಯುದ್ಧ ಶುರುವಾಗಿ ಇಂದಿಗೆ 11 ದಿನ. ದಿನದಿಂದ ದಿನಕ್ಕೆ ಯುದ್ಧದ ಭೀಕರತೆ ಹೆಚ್ಚಾಗುತ್ತಿದ್ದು, ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಳೆ (ಬುಧವಾರ) ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರೊಂದಿಗೆ ಯುದ್ಧದ ಭೀಕರತೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.
ಇತ್ತ ಇಸ್ರೇಲ್ ಸೇನೆಯು ಗಾಜಾದಲ್ಲಿರುವ (Gaza) ಹಮಾಸ್ ಉಗ್ರರ ವಿರುದ್ಧ ಸಮರ ಸಾರುತ್ತಿದ್ದು, ಮತ್ತಷ್ಟು ದಾಳಿ ಮಾಡಲು ತಯಾರಿ ನಡೆಸುತ್ತಿದೆ. ಈ ವೇಳೆ ಅಲ್ಲಿನ ಪ್ರಧಾನಿಯೊಂದಿಗೆ ಬೈಡೆನ್ ಸುದೀರ್ಘ ಮಾತುಕತೆಯ ಬಳಿಕ ಇಸ್ರೇಲ್ ಜೊತೆಗಿನ ಒಗ್ಗಟ್ಟನ್ನು ಪುನರುಚ್ಛರಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಅಕ್ರಮವಾಗಿ ಇಸ್ರೇಲ್ ಗಡಿಯನ್ನು ನುಸುಳಿದೆ.
ಇಲ್ಲಿ ಜನರ ಹತ್ಯೆ ಮಾಡುವುದಲ್ಲದೇ ಮಹಿಳೆಯರು, ಮಕ್ಕಳು ಸೇರಿದಂತೆ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಯುದ್ಧ ಆರಂಭವಾದ ಬಳಿಕ ಗುಂಡು ಹಾರಿಸಿ, ಇರಿದು ಮತ್ತು ಸುಟ್ಟು 1,400 ಕ್ಕೂ ಜನರನ್ನು ಹಮಾಸ್ ಹತ್ಯೆ ಮಾಡಿದೆ. ಏಳು ದಿನಗಳ ನಿರಂತರ ಬಾಂಬ್ ದಾಳಿಯು ಹಮಾಸ್ ನೆಲೆಗಳನ್ನು ನಾಶಪಡಿಸಿದೆ. ಎರಡೂ ಕಡೆಗಳಲ್ಲಿ ಒಟ್ಟು 3,000 ಜೀವಗಳನ್ನು ಯುದ್ಧ ಬಲಿ ತೆಗೆದುಕೊಂಡಿದೆ.
ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ ಉತ್ತರದಲ್ಲಿ 1.1 ಮಿಲಿಯನ್ ಪ್ಯಾಲೆಸ್ತೀನಿಯಾದವರಿಗೆ ಸ್ಥಳಾಂತರಿಸುವ ಆದೇಶಗಳನ್ನು ನೀಡಿತು. ಅದರ 2.4 ಮಿಲಿಯನ್ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣದ ಕಡೆಗೆ ಚಲಿಸುವಂತೆ ಒತ್ತಾಯಿಸಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ವಿವರಿಸಿದ್ದರು.