ನವದೆಹಲಿ: ಪವಿತ್ರ ಕುರಾನ್ನಲ್ಲಿ ಸ್ಥಾನ ಪಡೆದಿರುವ ಹೆಸರನ್ನು ನಾಯಿ ಮರಿಗೆ ಇಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಅಕ್ಟೋಬರ್ 4ರಂದು ವಿಶ್ವ ಪ್ರಾಣಿ ದಿನದಂದು ರಾಹುಲ್ ತಮ್ಮ ತಾಯಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು.
ಎಐಎಂಐಎಂ ವಕ್ತಾರ ಮೊಹಮ್ಮದ್ ಫರ್ಹಾನ್ ಅವರು ತಮ್ಮ ವಕೀಲ ಅಮ್ಜದ್ ಅಲಿ ಮೂಲಕ ರಾಹುಲ್ ಗಾಂಧಿ ದೂರು ದಾಖಲಿಸಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೂರು ತಿಂಗಳ ಹಿಂದೆ ಸ್ವತಃ ಫರ್ಹಾನ್ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ಸದ್ಯ ಫರ್ಹಾನ್ ಬಂಧನಕ್ಕೆ ತಡೆ ನೀಡಲಾಗಿದೆ.
ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳಿಗೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ರಾಹುಲ್ ಗಾಂಧಿ ಅವರು ತಮ್ಮ ನಾಯಿ ಮರಿಗೆ ‘ನೂರಿ’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಪ್ರವಾದಿ ಮುಹಮ್ಮದ್ ಅವರಿಗೆ ಸಂಪರ್ಕ ಹೊಂದಿರುವುದರಿಂದ ಅದನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು ಮೊಹಮ್ಮದ್ ಫರ್ಹಾನ್ ದೂರಿನಲ್ಲಿ ತಿಳಿಸಿದ್ದಾರೆ