ತಿರುವನಂತಪುರಂ: ಕೇರಳ ನಾಯಕರು ಜೆಡಿಎಸ್-ಬಿಜೆಪಿ ಮೈತ್ರಿಗೆ (BJP-JDS Alliance) ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Devegowda) ನೀಡಿರುವ ಹೇಳಿಕೆ ಸುಳ್ಳು ಮತ್ತು ಅಸಂಬದ್ಧ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೇರಳದ ಸಿಪಿಐ (ಎಂ) ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೆಚ್ಡಿಡಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಣರಾಯ್ ವಿಜಯನ್ (Pinarayi Vijayan), ಈ ವಿಚಾರ ಸುಳ್ಳು ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಸಿಪಿಐ(ಎಂ) ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇತ್ತೀಚೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್ಡಿಎ) ಸೇರ್ಪಡೆಯಾಗಿದೆ. ಈ ನಿರ್ಧಾರವು ರಾಜ್ಯದ ಅನೇಕ ಜೆಡಿಎಸ್ ನಾಯಕರಿಗೆ ಇಷ್ಟವಾಗಲಿಲ್ಲ. ಪಕ್ಷದ ಕೇರಳ ಘಟಕವೂ ಸಹ ಎನ್ಡಿಎ ಸೇರುವ ಕೇಂದ್ರ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಿತು. ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಜೆಡಿಎಸ್ನ ಎಲ್ಲಾ ರಾಜ್ಯ ಘಟಕಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿವೆ ಎಂದು ದೇವೇಗೌಡರು ಗುರುವಾರ ಪ್ರತಿಪಾದಿಸಿದ್ದರೆಂದು ವರದಿಯಾಗಿತ್ತು.