ಬಿಗ್ಬಾಸ್ ಮನೆಯಲ್ಲೀಗ ಎರಡು ತಂಡಗಳಾಗಿರುವುದು ಗೊತ್ತೇ ಇದೆ. ಬಿಗ್ಬಾಸ್, JioCinema ವತಿಯಿಂದ ರಣಶಕ್ತಿ ಮತ್ತು ಮಾಣಿಕ್ಯ ತಂಡಗಳಿಗೆ ಒಂದು ಸ್ಪೆಷಲ್ ಟಾಸ್ಕ್ ಕೊಟ್ಟಿತ್ತು. ಈ ಟಾಸ್ಕ್ ಹೆಸರು ‘ಹೂಂ ಅಂತಿಯಾ ಊಹೂಂ ಅಂತಿಯಾ?’.
ಆಟದ ಸ್ವರೂಪ ಮತ್ತು ನಿಯಮಗಳು ಹೀಗಿದ್ದವು: ಇದರ ಅನುಸಾರ ಆಡುವ ಪ್ರತಿ ಸದಸ್ಯರು ಕಣ್ಣುಪಟ್ಟಿ ಧರಿಸಿ ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನಕ್ಕೆ ಬಂದು, ಅಲ್ಲಿಯ ಆನೆಯ ಚಿತ್ರಕ್ಕೆ ಬಾಲ ಬಿಡಿಸಬೇಕಿತ್ತು. ಆಡುವ ಪ್ರತಿ ಸದಸ್ಯರಿಗೆ ಎದುರಾಳಿ ತಂಡದ ಸದಸ್ಯರು ಕಣ್ಣುಪಟ್ಟಿ ಕಟ್ಟಿ, ಆರಂಭಿಕ ಸ್ಥಾನದಲ್ಲಿ ಸುತ್ತಿಸಿ, ಆನೆಯ ಚಿತ್ರವಿರುವ ಸ್ಥಳದತ್ತ ಬಿಡಬೇಕು. ಆಡುವ ಸದಸ್ಯ ಸಾಗುತ್ತಿರುವ ದಾರಿ ಸರಿಯೇ ಇಲ್ಲವೇ ಎಂದು ಅವರ ತಂಡದ ಸದಸ್ಯರು ಹೂಂ ಅಥವಾ ಊಹೂಂ ಎಂದು ಹೇಳುವ ಮೂಲಕ ಸೂಚಿಸಬೇಕು. ತನ್ನ ತಂಡದವರ ಸೂಚನೆಯ ಪ್ರಕಾರ ಆಡುವ ಸದಸ್ಯ, ಆರಂಭಿಕ ಸ್ಥಾನದಿಂದ ಬಾಲವಿಲ್ಲದ ಆನೆಯ ಚಿತ್ರದ ಬಳಿ ಬಂದು ಅದಕ್ಕೆ ಬಾಲ ಬಿಡಿಸಬೇಕು. ಟಾಸ್ಕ್ ಮುಗಿಯುವ ಹೊತ್ತಿಗೆ, ಅತಿ ಹೆಚ್ಚು ಬಾರಿ ಸರಿಯಾಗಿ ಬಾಲ ಬಿಡಿಸಿದ ತಂಡ ಈ ಟಾಸ್ಕ್ ಗೆಲ್ಲುತ್ತದೆ.
ಮೊದಲು ಕಣಕ್ಕಿಳಿದಿದ್ದು ರಣಶಕ್ತಿ ತಂಡದದಿಂದ ಸಂಗೀತಾ ಶೃಂಗೇರಿ. ಅವರಿಗೆ ವಿನಯ್ ಕಪ್ಪುಪಟ್ಟಿ ಕಟ್ಟಿ ಬಿಟ್ಟರು. ತನಿಷಾ ಅವರಿಗೆ ಸಹಾಯ ಮಾಡುತ್ತಿದ್ದರು. ಸಂಗಗೀತಾ ತುಂಬ ಸುಲಭವಾಗಿ ಆನೆಯ ಚಿತ್ರದ ಬಳಿ ತೆರಳಿ,ತನಿಷಾ ಅವರ ಸಂಕೇತಗಳ ಮೂಲಕ ಮೊದಲ ಆನೆಗೆ ಬಾಲ ಬಿಡಿಸಿಬಿಟ್ಟರು. ಅದಕ್ಕೆ ಎರಡೂ ತಂಡಗಳ ಚಪ್ಪಾಳೆಯೂ ಸಿಕ್ಕಿತು.
ನಂತರ ಮಾಣಿಕ್ಯ ತಂಡದಿಂದ ನಮ್ರತಾ ಅಖಾಡಕ್ಕಿಳಿದರು. ಅವರ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿದ್ದು ಕಾರ್ತಿಕ್. ನಮ್ರತಾ ಸಹಾಯಕ್ಕೆ ನಿಂತಿದ್ದು, ವಿನಯ್. ನಮ್ರತಾ ನೇರವಾಗಿ ಚಿತ್ರದ ಬಳಿ ತೆರಳಿದರು. ಆದರೆ ಬಾಲ ಬಿಡಿಸುವ ಜಾಗಹುಡುಕಲು ತುಸು ಪರದಾಡಿದರು. ಆದರೆ ವಿನಯ್ ಸೂಚನೆಯ ನೆರವಿನಿಂದ ಸರಿಯಾದ ಜಾಗ ಗುರ್ತಿಸಿ ಬಾಲ ಬಿಡಿಸಿಯೇಬಿಟ್ಟರು.
ನಂತರ ರಣಶಕ್ತಿ ತಂಡದಿಂದ ನೀತು ಕೂಡ ಸುಲಭವಾಗಿ ಚಿತ್ರದ ಬಳಿ ತೆರಳಿ ಬಾಲ ಬಿಡಿಸಿದರು. ಮಾಣಿಕ್ಯ ತಂಡದಿಂದ ಸ್ಪರ್ಧೆಗಿಳಿದ ಇಶಾನಿ. ರಾಂಪ್ ವಾಕ್ ಮಾಡಿದಷ್ಟೇ ಸಲೀಸಾಗಿ ಚಿತ್ರದ ಬಳಿ ತೆರಳಿ, ಬಾಳವನ್ನೂ ಬಿಡಿಸಿದರು. ಬಾಲ ತುಸು ಗಿಡ್ಡವಾಗಿತ್ತಷ್ಟೆ!
ನಂತರ ರಣಶಕ್ತಿ ಮತ್ತು ಮಾಣಿಕ್ಯ ತಂಡಗಳಿಂದ ವರ್ತೂರು ಸಂತೋಷ್, ಸಿರಿ ಯಶಸ್ವಿಯಾಗಿ ಚಿತ್ರದ ಬಳಿ ತೆರಳಿ ಬಾಲ ಬಿಡಿಸಿದರು. ತುಕಾಲಿ ಸಂತೋಷ್ ಚಿತ್ರದ ಬಳಿಯೇನೋ ಸುಲಭವಾಗಿ ತೆರಳಿದರು. ಆದರೆ ಆನೆಯ ಸೊಂಡಿಲಿಗೆ ಬಾಲ ಬಿಡಿಸಲು ಹೊರಟಿದ್ದರು. ನಂತರ ಅವರ ತಂಡದ ಸೂಚನೆಗಳನ್ನು ಗಮನಿಸಿ ಸರಿಯಾದ ಜಾಗಕ್ಕೆ ಬಾಲ ಬಿಡಿಸಿದರು.
ಭಾಗ್ಯಶ್ರಿ ದಾರಿಯೇ ತಪ್ಪಿ ಬೇರೆಯೇ ಕಡೆಗೆ ಹೊರಟುಬಿಟ್ಟರು. ತಂಡದವರೆಲ್ಲ ಊಹೂಂ ಎಂದು ಸೂಚನೆ ನೀಡಿ ಚಿತ್ರದ ಬಳಿ ಕಳಿಸಿದರು. ತುಸು ಕಷ್ಟಪಟ್ಟೇ ಅವರು ಆನೆಗೆ ಬಾಲ ಬಿಡಿಸಿದರು. ಆ ಬಾಲ ಬಾಲದಂತಿರದೆ ಕೈಯಂತಿತ್ತು! ಬುಲೆಟ್ ರಕ್ಷಕ್ ಅವರಂತೂ ಚಿತ್ರದ ಬದಲಿಗೆ ಮನೆಯೊಳಗಿನ ಕ್ಯಾಮೆರಾ ಹುಡುಕಿಕೊಂಡು ಹೊರಟಂತಿತ್ತು!
ಇಂಥ ಹಲವಾರು ಮೋಜಿನ ಗಳಿಗೆಗಳಿಗೆ ಈ ಟಾಸ್ಕ್ ಸಾಕ್ಷಿಯಾಯಿತು. ಮನೆಯಲ್ಲಿನ ಸ್ಪರ್ಧಿಗಳೂ ಈ ಆಟದವನ್ನು ನಗುನಗುತ್ತಲೇ ಸಖತ್ ಎಂಜಾಯ್ ಮಾಡಿದ್ರು. ಕೊನೆಯಲ್ಲಿ ಎಲ್ಲ ಸ್ಪರ್ಧಿಗಳು ತಾವು ಬಾಲ ಬಿಡಿಸಿದ ಚಿತ್ರಗಳನ್ನು ಹಿಡಿದು ನಿಂತರು. ಇಲ್ಲಿ ವಿನಯ್ ಮತ್ತು ಕಾರ್ತಿಕ್ ಚರ್ಚೆ ಮಾಡಿ ‘ರಣಶಕ್ತಿ’ ತಂಡದ ಸದಸ್ಯರೇ ಹೆಚ್ಚು ಸರಿಯಾಗಿ ಬಾಲ ಬಿಡಿಸಿದೆ ಎಂಬ ನಿರ್ಧಾರಕ್ಕೆ ಬಂದರು. ವಿನಯ್ ಅವರೇ ‘ರಣಶಕ್ತಿ ತಂಡ ವಿನ್ ಆಗಿದೆ ಎಂದು ಘೋಷಿಸಿದರು.