ಎಲ್ಲೆಲ್ಲೂ ಬರ ಆವರಿಸಿ ಕೃಷಿ ಚಟುವಟಿಕೆ, ರೈತರು ಮಂಕಾಗಿದ್ದಾರೆ. ಆದರೆ, ಹೂ ಬೆಳೆಗಾರನ ಮುಖ ಮಾತ್ರ ಹೂವಿನಂತೇ ಅರಳಿದೆ. ಅದರಲ್ಲೂ ತಿಂಗಳ ಹಿಂದೆ ಚಿಲ್ಲರೆ ಕಾಸಿಗೆ ಸೇವಂತಿಗೆ ಮಾರಿದ್ದ ಬೆಳೆಗಾರರಿಗೆ ಈಗ ಇಳುವರಿ, ಬೆಲೆ ಎರಡೂ ಒಟ್ಟಿಗೇ ಸಿಕ್ಕಿರುವುದು ಹಬ್ಬದ ಸಂಭ್ರಮ ಇಮ್ಮಡಿ ಮಾಡಿದೆ.
ದಸರಾ ಬಂದರೆ ಹೂವುಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ದೇವರ ಅಲಂಕಾರಕ್ಕೆ ಸೇವಂತಿಗೆ ಹೆಚ್ಚಾಗಿ ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಎಲ್ಲರೂ ಬಣ್ಣ ಬಣ್ಣದ ಸೇವಂತಿಗೆ ಅರಸುವವರೇ. ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸಿರುವುದರಿಂದ ಈ ಬಾರಿ ಹೂವು ಇಳುವರಿ ಕಡಿಮೆಯಾಗಿ, ಬೆಲೆ ಗಗನಕ್ಕೇರುವ ನಿರೀಕ್ಷೆಯಿತ್ತು. ವಿಶೇಷವೆಂದರೆ ಈ ಬಾರಿ ಸೇವಂತಿಗೆ ಇಳುವರಿ ಉತ್ತಮವಾಗಿದೆ. ಇತ್ತ ಗ್ರಾಹಕರಿಗೆ ಬೆಲೆ ಭಾರವಾಗಿಲ್ಲ, ಅತ್ತ ಬೆಳೆಗಾರರಿಗೂ ಸಮಾಧಾನಕರ ಬೆಲೆ ಸಿಗುತ್ತಿದೆ.
ಬೆಲೆ ಚೇತರಿಕೆ
15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೆಜಿ ಸೇವಂತಿಗೆ ಹೋಲ್ಸೇಲ್ ದರ 10 ರೂ. ತಲುಪಿ ದಾಖಲೆ ಕುಸಿತ ಕಂಡಿತ್ತು. ತಿಂಗಳ ಹಿಂದೆ ದರ ಕುಸಿತದ ಏಟಿಗೆ ನಲುಗಿದ್ದ ಬೆಳೆಗಾರರು ಹೂ ಬೆಳೆ ನಾಶ ಮಾಡಿದ್ದರು. ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದ್ದು, ಕೆಜಿ ಸೇವಂತಿಗೆಗೆ 40 ರೂ. ಬೆಲೆ ಸಿಗುತ್ತಿದೆ. ಮ್ಯಾರಿಗೋಲ್ಡ್ ತಳಿ ಬೆಲೆ 120 ರೂ. ತಲುಪಿದೆ.
ಇಳುವರಿ ಹೆಚ್ಚಿಸಿದ ಬರ
ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸೇವಂತಿಗೆ ಇಳುವರಿ ಹೆಚ್ಚು. ಆದರೆ, ಇದೇ ಸಮಯಕ್ಕೆ ಮಳೆ ಬಿದ್ದು ಶೇ. 50ರಷ್ಟು ಹೂಗಳು ಹಾಳಾಗುತ್ತಿದ್ದವು. ಈ ವರ್ಷ ಮಳೆ ಬಾರದೆ ಎಲ್ಲೆಡೆ ಬರದ ಛಾಯೆ ಆವರಿಸಿದೆ. ಈ ಬರವೇ ಸೇವಂತಿಗೆ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ. ಹೂ ಕೃಷಿಗೆ ಅಂತರ್ಜಲವೇ ಆಧಾರ. ಕಾರಣ, ಬರ ಹೂವು ಬೆಳೆ ಮೇಲೆ ಪರಿಣಾಮ ಬೀರಿಲ್ಲ. ಬದಲಿಗೆ ಬಿಸಿಲು ಹೆಚ್ಚಿರುವ ಕಾರಣ ಒತ್ತಡದಿಂದಾಗಿ ಮೊಗ್ಗುಗಳು ಬೇಗ ಅರಳುತ್ತಿದ್ದು, ಶೇ. 30-40ರಷ್ಟು ಇಳುವರಿ ವೃದ್ಧಿಸಿದೆ.