ಅಫಘಾನಿಸ್ತಾನ ತಂಡ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಟೂರ್ನಿಯಲ್ಲಿ ಜಯಂಟ್ ಕಿಲ್ಲರ್ ಎನಿಸಿಕೊಂಡಿರುವ ಅಫ್ಘಾನಿ ಪಡೆ ದೈತ್ಯ ಇಂಗ್ಲೆಂಡ್ ಮತ್ತು ಏಷ್ಯನ್ ಜಯಂಟ್ಸ್ ಪಾಕಿಸ್ತಾನ ಎದುರು ಅಧಿಕಾರಯುತ ಜಯ ದಾಖಲಿಸಿದೆ. ಅಂದಹಾಗೆ ಅಫಘಾನಿಸ್ತಾನ ತಂಡ ಈ ಅಸಾಧಾರಣ ಪ್ರದರ್ಶನದ ಹಿಂದೆ ಭಾರತದ ಮಾಜಿ ನಾಯಕ ಅಜಯ್ ಜಡೇಜಾ ಅವರ ಪರಿಶ್ರಮವಿದೆ ಎಂಬುದು ವಿಶೇಷ.
2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಫಘಾನಿಸ್ತಾನ ತಂಡ ಅಜಯ್ ಜಡೇಜಾ ಅವರನ್ನು ತನ್ನ ಮೆಂಟರ್ ಆಗಿ ತೆಗೆದುಕೊಂಡಿತು. ಇದರ ಫಲ ಈಗ ಟೂರ್ನಿಯಲ್ಲಿ ಕಾಣಲು ಸಿಕ್ಕಿದೆ. ಮೊದಲು ಇಂಗ್ಲೆಂಡ್ ಎದುರು ದಿಲ್ಲಿಯಲ್ಲಿ 69 ರನ್ಗಳ ಭರ್ಜರಿ ಜಯ ದಾಖಲಿಸಿದ ಅಫ್ಘಾನಿ ಪಡೆ, ಇದೀಗ ಚೆನ್ನೈನಲ್ಲಿ ಪಾಕಿಸ್ತಾನ ಎದುರು 8 ವಿಕೆಟ್ಗಳ ಐತಿಹಾಸಿಕ ಜಯ ದಾಖಲಿಸಿ ಟೂರ್ನಿಯ ಸೆಮಿಫೈನಲ್ಸ್ ರೇಸ್ನಲ್ಲಿ ಉಳಿದುಕೊಂಡಿದೆ.
ಸದ್ಯ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿರುವ ಅಫಘಾನಿಸ್ತಾನ ತಂಡ ಕೇವಲ ನೆಟ್ರನ್ರೇಟ್ನಲ್ಲಿ ಮಾತ್ರವೇ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳಿಗಿಂತ ಹಿಂದುಳಿದಿದೆ. ಅಫಘಾನಿಸ್ತಾನ ತಂಡದ ಈ ಅವಿಸ್ಮರಣೀಯ ಪ್ರದರ್ಶನದ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮೆಂಟರ್ ಅಜಯ್ ಜಡೇಜಾ ಅವರ ಮಾರ್ಗದರ್ಶನವನ್ನು ಗುಣಗಾನ ಮಾಡಲಾಗಿದೆ