ಬೆಂಗಳೂರು;-ನಾಯಂಡಹಳ್ಳಿಯ ಪಂತರ ಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ಐ ನೆಟ್ ವರ್ತಿಂಗ್ ಸಂಸ್ಥೆಯು ಇದೇ 27ರಿಂದ 29ರವರೆಗೆ ತಿಂಡಿಪೋತರ ಹಬ್ಬ’ ಹಮ್ಮಿಕೊಂಡಿದೆ.
ಈ ಬಗ್ಗೆ ಹಬ್ಬದ ಆಯೋಜಕ ಡಿ. ನರೇಶ್ ಬಾಬು, ‘ಮೂರು ದಿನಗಳ ಈ ಹಬ್ಬದಲ್ಲಿ 80ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ಸಾವಿರಕ್ಕೂ ಹೆಚ್ಚು ಬಾಣಸಿಗರ ಕೈರುಚಿಯನ್ನು ಆಸ್ವಾದಿಸಬಹುದಾಗಿದೆ.
ಇಲ್ಲಿ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. 600ಕ್ಕೂ ಹೆಚ್ಚು ಬಗೆಯ ವಿವಿಧ ಸಸ್ಯಹಾರಿ ಆಹಾರ ಖಾದ್ಯಗಳನ್ನು ಸವಿಯಬಹುದು. ಕೆಲವರು ಸ್ಥಳದಲ್ಲಿಯೇ ತಿನಿಸುಗಳನ್ನು ತಯಾರಿಸಿ ವಿತರಿಸುತ್ತಾರೆ’ ಎಂದು ಹೇಳಿದರು.
‘ಮೂರು ದಿನಗಳ ಈ ಹಬ್ಬದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತ, ಉತ್ತರ ಭಾರತದ ವಿವಿಧ ದೇಸಿ ಮತ್ತು ವಿದೇಶಿ ಆಹಾರಗಳು ಇಲ್ಲಿರುತ್ತವೆ’ ಎಂದು ತಿಳಿಸಿದರು.
ಇನ್ನೊಬ್ಬ ಆಯೋಜಕ ಡಿ.ಡಿ. ಪ್ರಶಾಂತ್, ‘ಈ ಹಬ್ಬದಲ್ಲಿ ಪರಿಸರಸ್ನೇಹಿ ವಸ್ತುಗಳಿಗೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಹಾಡು, ನೃತ್ಯ ಸೇರಿ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.