ಅಫಘಾನಿಸ್ತಾನ ವಿರುದ್ಧ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ (74 ರನ್) ಸಿಡಿಸಿದ ಪಾಕಿಸ್ತಾನ ನಾಯಕ ಬಾಬರ್ ಆಝಮ್ (829) ಬುಧವಾರ (ಅಕ್ಟೋಬರ್ 25) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ ನೂತನ ಒಡಿಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಸಿಡಿಸಿದ್ದ ಟೀಮ್ ಇಂಡಿಯಾ ಓಪನರ್ ಶುಭಮನ್ ಗಿಲ್, ಬಾಬರ್ ಆಝಮ್ ಅವರಿಗಿಂತ 6 ಅಂಕ ಕಡಿಮೆಯಿದ್ದು 2ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಲಯದಲ್ಲಿದ್ದು ನೂತನ ಶ್ರೇಯಾಂಕ ಪಟ್ಟಿಯಲ್ಲಿ 4 ಸ್ಥಾನಗಳನ್ನು ಏರಿಕೆ ಕಂಡು ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಅವರೊಂದಿಗೆ ಜಂಟಿ 5ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
2023ರ ಒಡಿಐ ವಿಶ್ವಕಪ್ ಟೂರ್ನಿಯ 5 ಪಂದ್ಯಗಳಿಂದ ವಿರಾಟ್ ಕೊಹ್ಲಿ, 354 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಜೇಯ 103 ರನ್ ಸಿಡಿಸಿ ಒಡಿಐನ 48ನೇ ಶತಕ ಪೂರೈಸಿದ್ದ ಕಿಂಗ್ ಕೊಹ್ಲಿ , ಆಸ್ಟ್ರೇಲಿಯಾ ವಿರುದ್ಧ 85 ರನ್, ಅಫಘಾನಿಸ್ತಾನ ವಿರುದ್ಧ 55 ಹಾಗೂ ನ್ಯೂಜಿಲೆಂಡ್ ವಿರುದ್ಧ 95 ರನ್ ಬಾರಿಸಿ 747 ಅಂಕಗಳನ್ನು ಹೊಂದಿದ್ದಾರೆ.
ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ಶ್ರೇಯಾಂಕ ಪಟ್ಟಿ (ಅಗ್ರ 10)
1. ಬಾಬರ್ ಆಝಮ್ – 829
2. ಶುಭಮನ್ ಗಿಲ್ – 823
3. ಕ್ವಿಂಟನ್ ಡಿ ಕಾಕ್ – 769
4. ಹೆನ್ರಿಚ್ ಕ್ಲಾಸೆನ್ – 756
5. ವಿರಾಟ್ ಕೊಹ್ಲಿ – 747
5. ಡೇವಿಡ್ ವಾರ್ನರ್ – 747
7. ಹ್ಯಾರಿ ಟೆಕ್ಟರ್ – 729
8. ರೋಹಿತ್ ಶರ್ಮಾ – 725
9. ರಾಸಿ ವ್ಯಾನ್ ಡೆರ್ ಡಸೆನ್- 716
10. ಇಮಾಮ್ ಉಲ್ ಹಕ್ – 704