ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ಎದುರು ಪಾಕಿಸ್ತಾನ ತಂಡ 8 ವಿಕೆಟ್ಗಳ ಹೀನಾಯ ಸೋಲುಂಡ ಬೆನ್ನಲ್ಲೇ ಪಾಕ್ ತಂಡದ ನಾಯಕ ಬಾಬರ್ ಆಝಮ್ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲಿ ಮಾಜಿ ನಾಯಕ ಹಾಗೂ ದಿಗ್ಗಜ ಆಲ್ರೌಂಡರ್ ಶಾಹಿದ್ ಅಫ್ರಿದಿ ಟೀಕೆಗಳ ಸುರಿಮಳೆಗೈದಿದ್ದು, ಬಾಬರ್ ಆಝಮ್ ಕ್ಯಾಪ್ಟನ್ಸಿಯಲ್ಲಾದ ಸಾಲು ಸಾಲು ಎಡವಟ್ಟುಗಳ ಕಡೆಗೆ ಬೆಳಕು ಚೆಲ್ಲಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಕ್ಟೋಬರ್ 23ರಂದು (ಸೋಮವಾರ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಪಾಕಿಸ್ತಾನ ತಂಡ ನಾಯಕ ಬಾಬರ್ ಆಝಮ್ (74) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 50 ಓವರ್ಗಳಲ್ಲಿ 282 ರನ್ಗಳ ಸವಾಲಿನ ಸ್ಕೋರ್ ಕಲೆಹಾಕಿತ್ತು. ಆದರೆ, ಈ ಗುರಿಯನ್ನು ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಮೆಟ್ಟಿ ನಿಲ್ಲುವಲ್ಲಿ ಅಫಘಾನಿಸ್ತಾನ ಯಶಸ್ವಿಯಾಯಿತು. ರೆಹಮಾನುಲ್ಲಾ ಗುರ್ಬಝ್, ಇಬ್ರಾಹಿಮ್ ಝದ್ರಾನ್ ಮತ್ತು ರೆಹಮತ್ ಶಾ ಸ್ಪೋಟಕ ಅರ್ಧಶತಕಗಳನ್ನು ಬಾರಿಸಿ ಅಫಘಾನಿಸ್ತಾನ ತಂಡಕ್ಕೆ ಅವಿಸ್ಮರಣೀಯ ಜಯ ತಂದರು.
ಟೂರ್ನಿಯಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದ ಪಾಕಿಸ್ತಾನ ತಂಡ ಬಳಿಕ ಸತತ ಮೂರು ಸೋಲುಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ಅಂತಹ ಬಲಿಷ್ಠ ತಂಡಗಳ ಎದುರು ಸೋತಿದ್ದನ್ನು ಸಮರ್ಥಿಸಿಕೊಂಡರೂ, ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧದ ಸೋಲು ಪಾಕ್ ಪಡೆಗೆ ನುಂಗಲಾರದ ತುತ್ತಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಹಲವು ಮಾಜಿ ಕ್ರಿಕೆಟಿಗರು ಟೀಕೆಗಳ ಸುರಿಮಳೆಗೈದಿದ್ದಾರೆ.