ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಅದರಂತೆ ಆಸ್ಟ್ರೇಲಿಯಾ, ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ ಭಾರತ ತಂಡ ತನ್ನ ಆರಂಭಿಕ ಮೂರೂ ಪಂದ್ಯಗಳಲ್ಲಿ ಗೆದ್ದು ಶುಭಾರಂಭ ಮಾಡಿದೆ.
“ರೋಹಿತ್ ಶರ್ಮಾ ಅವರು ಬಹಳಾ ನಿರಾಂತಕ. ಅವರು ಏನೇ ಮಾಡಿದರೂ ಕೂಡ ನಿರಾಂತಕವಾಗಿ ಕಾಣುತ್ತಾರೆ ಹಾಗೂ ಒತ್ತಡ ಮತ್ತು ಆತಂಕಕ್ಕೆ ಒಳಗಾಗುವುದಿಲ್ಲ. ಅವರು ಆಡುವ ಹಾದಿಯನ್ನು ನೋಡಿದಾಗ ಇದು ನಮಗೆ ಅರ್ಥವಾಗಲಿದೆ. ಅವರು ಅದ್ಭುತ ಬ್ಯಾಟ್ಸ್ಮನ್ ಕೂಡ. ಮೈದಾನದ ಒಳಗೆ ಹಾಗೂ ಮೈದಾನದ ಹೊರಗೆ ಅವರು ಶಾಂತ ಸ್ವಭಾವದಲ್ಲಿ ಕಾಣುತ್ತಾರೆ. ಒಂದು ಕಡೆ ಕುಳಿತುಕೊಂಡು ಅವರ ಮೇಲೆ ಒತ್ತಡ ಇರುವುದಿಲ್ಲ ಅಥವಾ ಅವರ ಮೇಲೆ ಒತ್ತಡ ಬೀಳುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಇದು ವಿಶ್ವಕಪ್ ಟೂರ್ನಿಯಾಗಿರುವ ಕಾರಣ ಸಹಜವಾಗಿ ಒತ್ತಡ ಇದ್ದೇ ಇರುತ್ತದೆ,” ಎಂದು ಐಸಿಸಿ ಬಳಿ ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.
“ಆದರೆ, ರೋಹಿತ್ ಶರ್ಮಾ ಅವರು ಎಷ್ಟೇ ಒತ್ತಡದ ಸನ್ನಿವೇಶವಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಹಾಗೂ ಆತಂಕಕ್ಕೆ ಒಳಗಾಗುವುದಿಲ್ಲ. ಶಾಂತ ಸ್ವಭಾವದಿಂದ ಅವರು ಮೈದಾನದಲ್ಲಿ ಕಾಣಿಸುತ್ತಾರೆ,” ಎಂದು ಆಸ್ಟ್ರೇಲಿಯಾ ದಿಗ್ಗಜ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್, “ಅವರು ತುಂಬಾ ಭಾವನಾತ್ಮಕ ಆಟಗಾರ ಹಾಗೂ ಅವರು ಅಭಿಮಾನಿಗಳ ಮಾತನ್ನು ಕೇಳುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಕೊಹ್ಲಿಯಂತಹ ವ್ಯಕ್ತಿತ್ವ ಹೊಂದಿರುವ ಆಟಗಾರನಿಗೆ ನಾಯಕತ್ವ ಸ್ವಲ್ಪ ಕಷ್ಟವಾಗುತ್ತದೆ. ಆದರೆ, ರೋಹಿತ್ ಶರ್ಮಾಗೆ ಇದು ಯಾವುದೇ ತೊಂದರೆಯಾಗುವುದಿಲ್ಲ . ಅವರು ಅದ್ಭುತ ಆಟಗಾರ ಹಾಗೂ ಅದ್ಭುತ ನಾಯಕ. ಹಾಗಾಗಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದು,” ಎಂದು ಭವಿಷ್ಯ ನುಡಿದಿದ್ದಾರೆ.