ರ್ಯಾಪ್ ಸಂಗೀತದ ಮೂಲಕವೇ ಗುರುತಿಸಿಕೊಂಡಿದ್ದರೂ ಇಶಾನಿ (Ishani) ಬಿಗ್ಬಾಸ್ (Bigg Boss Kannada) ಮನೆಯೊಳಗೆ ಬಂದ ಮೇಲೆ ಅವರ ರ್ಯಾಪ್ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರದಲ್ಲಿ, ಮೈಕಲ್ ಜೊತೆಗಿನ ಸ್ಪೆಷಲ್ ಫ್ರೆಂಡ್ಶಿಪ್, ಟಾಸ್ಕ್ಗಳ ಕಾವು, ಜಗಳ ಈ ಎಲ್ಲದರಿಂದ ಅವರೊಳಗಿನ ರ್ಯಾಪ್ ಗರ್ಲ್ ಬಚ್ಚಿಟ್ಟುಕೊಂಡಂತಿದ್ದಳು.
ಆದರೆ, ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್ಬಾಸ್ ರಿಯಾಲಿಟಿ ಷೋನ ಸ್ಪೆಷಾಲಿಟಿ. ಅದು ಈ ಸೀಸನ್ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರ್ಯಾಪ್ ಗರ್ಲ್ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ. ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕನ್ನಡದಲ್ಲಿ ದಾಖಲಾಗಿದೆ.
ಇಶಾನಿ ಅವರೊಳಗಿನ ರ್ಯಾಪ್ ಗರ್ಲ್ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್ ರಕ್ಷಕ್. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ. ಇವತ್ತಿಡೀ ದಿನ ಇಶಾನಿ ಮ್ಯೂಸಿಕ್ ಮೂಡ್ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್ಗೆ ಹೋಗಿದ್ದರಂತೆ. ಇದರ ಕುರಿತೂ ಈವತ್ತು ಬಿಗ್ಬಾಸ್ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.