ಬೆಂಗಳೂರು: ಕೆಲ ದಿನಗಳ ಹಿಂದೆ ಅಡುಗೆಮನೆಯ ಕೆಂಪು ಸುಂದರಿ ಟೊಮೊಟೋ ಬೆಲೆ ಡಬಲ್ ಸೆಂಚುರಿ ಬಳಿಗೆ ಹೋಗಿತ್ತು. ಜನ ಟೊಮೊಟೋ ಖರೀದಿಸಲು ಭಯ ಪಡುವಂತೆ ಆಗಿತ್ತು.
ಈಗ ಈ ಸರದಿ ಅಡುಗೆ ಮನೆಯ ಮಹಾರಾಣಿಯಾಗಿರುವ ಈರುಳ್ಳಿಗೆ ಬಂದಿದೆ. ಮಳೆಯಿಲ್ಲದೇ ಈರುಳ್ಳಿ ಬೆಳೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಗಗನಕ್ಕೆ ಏರುತ್ತಿದೆ.
ಕಳೆದ ವಾರವಷ್ಟೇ 100 ರೂ.ಗೆ 3-4 ಕೆಜಿ ಈರುಳ್ಳಿ ದೊರೆಯುತ್ತಿತ್ತು. ಈಗ 70 ರಿಂದ 80 ರೂ.ಗೆ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣವೇನು ಅಂತಾ ಜನ ಈರುಳ್ಳಿ ವರ್ತಕರಲ್ಲಿ ಕೇಳುತ್ತಿದ್ದಾರೆ. ಈರುಳ್ಳಿ ಬೆಲೆ ಸದ್ದಿಲ್ಲದೇ ಗಗನಕ್ಕೆ ಏರುತ್ತಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಡಬಲ್ ರೇಟ್ ಆಗಿದೆ. ಕಳೆದ ವಾರ ಕೆಜಿಗೆ 30 ರಿಂದ 40 ರೂ. ಇದ್ದ ಈರುಳ್ಳಿ ಬೆಲೆ ಈಗ 70 ರಿಂದ 80 ರೂ. ಆಗಿದೆ.
ಬೆಂಗಳೂರಿಗೆ ರಾಜ್ಯದ ನಾನಾ ಭಾಗದಿಂದ ಮತ್ತು ಮಹಾರಾಷ್ಟ್ರ, ಆಂಧ್ರ, ಗುಜಾರಾತ್ನಿಂದ ಈರುಳ್ಳಿ ಲೋಡ್ ಬರುತ್ತಿತ್ತು. ಇದು ಈರುಳ್ಳಿ ಸೀಸನ್. ಈ ಟೈಮ್ಗೆ ಪ್ರತಿನಿತ್ಯ 1,000 ಲಾರಿ ಲೋಡ್ ಬರುತ್ತಿತ್ತು. ಮಳೆಯಾಗದ ಕಾರಣ ಬೆಳೆ ಬಂದಿಲ್ಲ. ಹಾಗಾಗಿ ಪ್ರತಿನಿತ್ಯ 250 ರಿಂದ 300 ಲೋಡ್ ಅಷ್ಟೇ ಬರುತ್ತಿದೆ. ಎಪಿಎಂಸಿಯಲ್ಲೇ (APMC) ಹೋಲ್ ಸೇಲ್ ಬೆಲೆ ಒಳ್ಳೆಯ ಈರುಳ್ಳಿಗೆ 60ರಿಂದ 65 ರೂ. ಆಗಿದೆ. ಮಾರ್ಕೆಟ್ನಲ್ಲಿ 70 ರಿಂದ 80 ರೂ. ಆಗುತ್ತಿದೆ ಎಂದು ಎಂಪಿಎಂಸಿಯ ವರ್ತಕರು ಹೇಳುತ್ತಿದ್ದಾರೆ