ಚೆನ್ನೈ: ಜಿದ್ದಾಜಿದ್ದಿನಿಂದ ಕಣದಲ್ಲಿ ವಿಶ್ವ ಕಪ್ನ 26ನೇ ಪಂದ್ಯದಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ 1 ವಿಕೆಟ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 23 ವರ್ಷಗಳ ಬಳಿಕ ICC ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಂಡಿದೆ. ಅಲ್ಲದೇ ಅಂಕಪಟ್ಟಿಯಲ್ಲಿ ಭಾರತವನ್ನೂ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದೆ.
ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 46.4 ಓವರ್ಗಳಲ್ಲಿ 270 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 47.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿ ರೋಚಕ ಜಯ ಸಾಧಿಸಿತು. 6 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿರುವ ಪಾಕ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿತು. 1979, 1983, 1987 ಮತ್ತು 2011ರಲ್ಲಿ 4 ಬಾರಿ ಸೆಮಿ ಫೈನಲ್, 1996 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ತಂಡ ಬೌಲಿಂಗ್ನಲ್ಲಿ ಚೇತರಿಕೆ ಕಂಡರೂ ಕಳಪೆ ಬ್ಯಾಟಿಂಗ್ನಿಂದ ಸೋತು ಸೆಮಿಸ್ ರೇಸ್ನಿಂದ ಹೊರಬಿದ್ದಿತು.
37 ಓವರ್ಗಳಲ್ಲಿ 235 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 41ನೇ ಓವರ್ನಲ್ಲಿ 251 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಶಾಹೀನ್ ಶಾ ಅಫ್ರಿದಿ (Shaheen Shah Afridi) ಮಾರಕ ದಾಳಿಗೆ ಪ್ರಮುಖ ವಿಕೆಟ್ಗಳು ಉರುಳಿದ್ದರಿಂದ ಪಾಕ್ ತಂಡದಲ್ಲಿ ಗೆಲುವಿನ ಭರವಸೆ ಚಿಮ್ಮಿತು. ಕೊನೆಯ 36 ಎಸೆತಗಳಲ್ಲಿ 15 ರನ್ ಬೇಕಿದ್ದಾಗ ಮೊಹಮ್ಮದ್ ವಾಸಿಂ ತಮ್ಮ 9ನೇ ಓವರ್ನಲ್ಲಿ 4 ರನ್ ಬಿಟ್ಟುಕೊಟ್ಟರು. ಹ್ಯಾರಿಸ್ ರೌಫ್ ಎಸೆದ 10ನೇ ಓವರ್ನಲ್ಲಿ 3ನೇ ಎಸೆತದಲ್ಲಿ ಕ್ಲೀನ್ ಕ್ಯಾಚ್ ಪಡೆಯುವ ಮೂಲಕ ಗೆಲುವಿನ ಭರವಸೆ ಮತ್ತಷ್ಟು ಇಮ್ಮಡಿಗೊಳಿಸಿದ್ದರು. ನಂತ್ರ ತಮ್ಮ 7ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ನವಾಜ್ 2ನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಡುವ ಮೂಲಕ ಪಾಕ್ ವಿರೋಚಿತ ಸೋಲಿಗೆ ಕಾರಣವಾದರು.