ಬೆಂಗಳೂರು: ನವೆಂಬರ್ 5ರಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದಹಾಗೆ ಭಾರತ ತಂಡ ಅದೇ ದಿನದಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಅಪಾಯಕಾರಿ ದಕ್ಷಿಣ ಆಫ್ರಿಕಾ ಎದುರು ಪೈಪೋಟಿ ನಡೆಸಲಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಒಡಿಐ ವೃತ್ತಿಬದುಕಿನ 50ನೇ ಶತಕ ಬಾರಿಸಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಸದ್ಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (49) ಹೆಸರಲ್ಲಿದೆ. 48 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಗೆ ಈ ದಾಖಲೆ ಮುರಿದು, ಒಡಿಐನಲ್ಲಿ 50 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ಬರೆಯಲು ಇನ್ನು 2 ಶತಕಗಳ ಅಗತ್ಯವಿದೆ.
“ದಕ್ಷಿಣ ಆಫ್ರಿಕಾ ಎದುರು ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಹುಟ್ಟು ಹಬ್ಬದ ದಿನದಂದು 50ನೇ ಒಡಿಐ ಶತಕ ಬಾರಿಸಲಿದ್ದಾರೆ. ಆಗ ಕೋಲ್ಕತಾದ ಜನತೆ ಎದ್ದುನಿಂತು ವಿರಾಟ್ ಕೊಹ್ಲಿಗೆ ಸಲಾಮ್ ಹೊಡೆಯುವುದನ್ನು ಅಂದಾಜಿಸಿಕೊಳ್ಳಬಹುದು. ಇಂಥದ್ದೊಂದು ಕ್ಷಣವನ್ನು ಪ್ರತಿಯೊಬ್ಬ ಬ್ಯಾಟರ್ ಬಯಸುತ್ತಾನೆ,” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಅಕ್ಟೋಬರ್ 29ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ಪೈಪೋಟಿ ನಡೆಸಲಿದೆ. ಬಳಿಕ ನವೆಂಬರ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ಎದುರು ಕಾದಾಟ ನಡೆಸಲಿದೆ. ನವೆಂಬರ್ 5ರಂದು ದಕ್ಷಿಣ ಆಫ್ರಿಕಾ ಎದುರು ಕಾದಾಡಲಿದೆ.