ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಎಂಜಿನಿಯರಿಂಗ್ ಸೀಟುಗಳ ಜೊತೆಗೆ 2ನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ನಂತರ ರದ್ದುಪಡಿಸಿಕೊಂಡಿರುವ ಪ್ರವೇಶ ಪಡೆಯದಿರುವ ಕಾರಣಕ್ಕೆ ಖಾಲಿ ಸೀಟುಗಳು ಎಂದು ಗುರುತಿಸಲಾಗಿರುವ ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಸೀಟುಗಳ ಹಂಚಿಕೆ ಅಕ್ಟೋಬರ್ 30ರಂದು ನಡೆಯಲಿದೆ. ಈ ಕುರಿತು ಮಾಧ್ಯಮ ಹೇಳಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಬಿಡುಗಡೆ ಮಾಡಿದೆ.
ಅಕ್ಟೋಬರ್ 27ರ ಮಧ್ಯಾಹ್ನ 1:00 ರಿಂದ ಇಚ್ಚೆ ಆಯ್ಕೆಗಳನ್ನು ದಾಖಲಿಸಲು ಆನ್ಲೈನ್ ಪೋರ್ಟಲ್ ಸಕ್ರಿಯಗೊಳಿಸಲಾಗುವುದು. 2023ನೇ ಸಾಲಿನಲ್ಲಿ ಯಾವುದೇ ಕೋರ್ಸಿಗೆ ಸೀಟು ಹಂಚಿಕೆ ಮಾಡಿಕೊಳ್ಳದಿರುವವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇಚ್ಚೆ ಆಯ್ಕೆಗಳನ್ನು ದಾಖಲಿಸಲು ಅಕ್ಟೋಬರ್ 29ರ ಬೆಳಗ್ಗೆ 10 ರವರೆಗೆ ಕಾಲಾವಕಾಶವಿರುತ್ತದೆ. ಇಲ್ಲಿಯವರೆಗೆ 2023ನೇ ಸಾಲಿನಲ್ಲಿ ಯಾವುದೇ ಸೀಟನ್ನು ಪ್ರಾಧಿಕಾರದ ಮೂಲಕ ಹಂಚಿಕೆ ಮಾಡಿಕೊಳ್ಳದಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಪೋರ್ಟಲ್ನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಹಾಗೂ ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಸೀಟುಗಳ ಲಭ್ಯತೆಯನ್ನು ಗಮನಿಸಿ, ನಂತರ ತಮ್ಮ ಇಚ್ಛೆ ಆಯ್ಕೆಗಳನ್ನು ಆದ್ಯತೆಯ ಮೇರೆಗೆ ದಾಖಲಿಸಬಹುದು
ವಿಶೇಷ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಅಕ್ಟೋಬರ್ 29ರ ಸಂಜೆ 6 ಗಂಟೆಯ ನಂತರ ಪ್ರಕಟಿಸಲಾಗುವುದು. ವಿಶೇಷ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಅಕ್ಟೋಬರ್ 30ರಂದು ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಿ, ಪ್ರವೇಶ ಆದೇಶ ಡೌನ್ಲೋಡಿ ಮಾಡಿಕೊಂಡು ಅದೇ ದಿನವೇ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು (Deemed Admission). ಉಳಿದಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಎಂಜಿನಿಯರಿಂಗ್ ಸೀಟುಗಳ ಮಾಹಿತಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ