ಪಣಜಿ: 37ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಗೋವಾದಲ್ಲಿ ಇದೇ ಮೊದಲಬಾರಿಗೆ ಕ್ರೀಡಾಕೂಟ ನಡೆಯುತ್ತಿದ್ದು, ಅದ್ಧೂರಿ ಚಾಲನೆ ದೊರೆತಿದೆ. 36ನೇ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟ ಗೋವಾದಲ್ಲಿ ನಡೆಯಬೇಕಿತ್ತು. ಆದ್ರೆ ಕೋವಿಡ್ ಕಾರಣಗಳಿಂದಾಗಿ ಗುಜರಾತ್ಗೆ ಕ್ರೀಡಾಕೂಟವನ್ನು ಸ್ಥಳಾಂತರಿಸಲಾಗಿತ್ತು.
ಇದೇ ಮೊದಲಬಾರಿಗೆ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ ಅಕ್ಟೋಬರ್ 26 ರಿಂದ ನವೆಂಬರ್ 9ರ ವರೆಗೆ ನಡೆಯಲಿದೆ. ಗೋವಾದ 5 ನಗರಗಳು (ಮಾಪುಸಾ, ಮಾರ್ಗೋ, ಪಂಜಿಮ್, ಪೋಂಡಾ ಮತ್ತು ವಾಸ್ಕೋ), 28 ಸ್ಥಳಗಳು ಹಾಗೂ 43 ಕ್ರೀಡಾ ವಿಭಾಗಗಳಲ್ಲಿ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಟ್ರ್ಯಾಕ್ ಸೈಕ್ಲಿಂಗ್ ಈವೆಂಟ್ ಮತ್ತು ಗಾಲ್ಫ್ ಮಾತ್ರ ಗೋವಾದ ಹೊರಗೆ ದೆಹಲಿಯಲ್ಲಿ ನಡೆಯಲಿದೆ.c
1924ರಲ್ಲಿ ಅವಿಭಜಿತ ಭಾರತದ ಲಾಹೋರ್ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಗಿತ್ತು. ಅಲ್ಲಿಂದ 1938ರ ವರೆಗೆ ಭಾರತೀಯ ಒಲಿಂಪಿಕ್ಸ್ ಕ್ರೀಡಾಕೂಟ ಎಂದೇ ಇದನ್ನು ಕರೆಯಲಾಗುತ್ತಿತ್ತು. ಸದ್ಯ ಗೋವಾದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಕಳೆದ ಆವೃತ್ತಿಗಿಂತಲೂ ಸುಮಾರು 3,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಒಳಗೊಂಡಿರುವ 43 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಾಂಸ್ಕೃತಿಕ ಸಂಕೇತವಾದ ಕುಂಬಿ ಶಾಲು ಹೊದಿಸಿ ಸನ್ಮಾನಿಸಿದರು.