ಟೆಲ್ ಅವಿವ್: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಸಂದರ್ಭದಿಂದ ಈವರೆಗೂ ಒಟ್ಟು 34 ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ ಎಂದು ‘ಮಿಡ್ಲ್ ಈಸ್ಟ್ ಮಾನಿಟರ್’ ವರದಿ ಮಾಡಿದೆ. ಇಸ್ರೇಲ್ ಮೇಲಿನ ಹಮಾಸ್ ಬಂಡುಕೋರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಲ್ಲಿ ಮೃತಪಟ್ಟ ಪತ್ರಕರ್ತರ ಪಟ್ಟಿಯನ್ನು ಗಾಜಾದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.
ಮೂವರು ಮಹಿಳೆಯರು ಸೇರಿದಂತೆ 34 ಪತ್ರಕರ್ತರು ದಾಳಿಗಳಲ್ಲಿ ಬಲಿಯಾಗಿದ್ದಾರೆ. ಇನ್ನೂ ಅನೇಕ ಪತ್ರಕರ್ತರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಅಕ್ಟೋಬರ್ 25ರಂದು ನುಸೀರಾತ್ ನಿರಾಶ್ರಿತರ ಶಿಬಿರದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ವಾಯೆಲ್ ಅಲ್ ದಾಹದುಹ್ ಅವರು ಹೆಂಡತಿ, ಮಗ ಹಾಗೂ ಮಗಳು ಸೇರಿದಂತೆ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರು.
ನಿರಾಶ್ರಿತರ ಶಿಬಿರದ ಮೇಲೆ ದಾಳಿ
ಸೋಮವಾರ ಇಸ್ರೇಲ್ ಪಡೆಗಳು ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಬ್ರಾಡ್ಕಾಸ್ಟ್ ಎಂಜಿನಿಯರ್ ಮುಹಮ್ಮದ್ ಅಬು ಅಲ್ ಕುಸ್ಮಾನ್ ಅವರು ತಮ್ಮ ಕುಟುಂಬದ 19 ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ.
ಇಸ್ರೇಲ್- ಲೆಬನಾನ್ ಗಡಿ ಭಾಗದಲ್ಲಿ ನಡೆದ ಸಂಘರ್ಷದಲ್ಲಿ ಇಸ್ರೇಲ್ನ ಗುಂಡೇಟಿಗೆ ಲೆಬನಾನ್ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. ಹಮಾಸ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್ ತನ್ನ ನಾಲ್ವರು ಪತ್ರಕರ್ತರನ್ನು ಕಳೆದುಕೊಂಡಿದೆ. ಈವರೆಗೂ ಎಂಟು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.