ಪಾಟ್ನಾ: ಬಿಹಾರದಲ್ಲಿ (Bihar) 2016 ರಿಂದ ಮದ್ಯ ಮಾರಾಟ ನಿಷೇಧವಾಗಿದೆ. ಹೀಗಾಗಿ ರಾಜ್ಯದ ಜನ ಆಲ್ಕೋಹಾಲ್ (Alcohol) ಎಲ್ಲಿ ಸಿಗುತ್ತದೆ ಅಂತಾ ಕಾಯುತ್ತಿದ್ದಾರೆ. ಅಂತೆಯೇ ಇದೀಗ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮದ್ಯದ ಬಾಟ್ಲಿಗಳನ್ನು ಯುವಕರನ್ನು ಕಸಿದುಕೊಂಡು ಓಡಿಹೋಗಿದ್ದಾರೆ.
ಯುವಕರು ಬಾಟ್ಲಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮದ್ಯ ತುಂಬಿದ್ದ ಕಾರು ಮತ್ತು ಇನ್ನೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಸಹಾಯ ಮಾಡುದ ಉದ್ದೇಶದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕಾರೊಳಗೆ ಆಲ್ಕೋಹಾಲ್ ಬಾಟ್ಲಿಗಳಿರುವುದನ್ನು ಅವರು ಗಮನಿಸಿದ್ದು, ಕೈಗೆ ಸಿಕ್ಕಿ ಬಾಟ್ಲಿಗಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇಬ್ಬರು ಬಾಟ್ಲಿಗಳನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಉಳಿದ ಮಂದಿಯೂ ಕೈಗೆ ಸಿಕ್ಕ ಬಾಟ್ಲಿಗಳನ್ನು ಹಿಡಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳದಲ್ಲಿದ್ದವರೊಬ್ಬರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.