ಕಠ್ಮಂಡು: ನೇಪಾಳದಲ್ಲಿ (Neapl Earthquake) ನಡೆದ ಭಾರೀ ಭೂಕಂಪನದಿಂದ ಜಾಜರ್ ಕೋಟ್ ಉಪ ಮೇಯರ್ (Jajarkot Deputy Mayor) ಸೇರಿ ಸಾವಿನ ಸಂಖ್ಯೆ 129ಕ್ಕೆ ಏರಿಕೆ ಆಗಿದೆ. ಜಾಜರ್ ಕೋಟ್ನ ನಲ್ಗಢ್ ಪುರಸಭೆಯ ಉಪಮೇಯರ್ ಸರಿತಾ ಸಿಂಗ್ (Deputy Mayor Sarita Singh) ಅವರು ಸಾವನ್ನಪ್ಪಿದ್ದಾರೆ.
ಉಪಮೇಯರ್ ಸಿಂಗ್ ಅವರು ಪಾಲಿಕೆಯ ಪ್ರಧಾನ ಕಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದರು. ಈ ವೇಳೆ ಭೂಕಂಪನದಿಂದ ಕಟ್ಟಡದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಕರ್ನಾಲಿ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಡಿಐಜಿ ಭೀಮ್ ಧಾಕಲ್ ಮಾಹಿತಿ ನೀಡಿದ್ದಾರೆ. ಉಪಮೇಯರ್ ಸರಿತಾ ಸಿಂಗ್ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.
ನವೆಂಬರ್ 3 ರಂದು ರಾತ್ರಿ 11:47ರ ಸುಮಾರಿಗೆ ಸಂಭವಿಸಿದ ಭೂಕಂಪವು ಕಠ್ಮಂಡು, ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ನವದೆಹಲಿಯವರೆಗೂ ವ್ಯಾಪಕವಾದ ಪರಿಣಾಮವನ್ನು ಬೀರಿತು. ವರದಿಗಳ ಪ್ರಕಾರ, ಪಶ್ಚಿಮ ನೇಪಾಳದ ಜಾಜರ್ ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಸರಿಸುಮಾರು 128 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.