ಬೆಂಗಳೂರು;- ಬೆಂಗಳೂರು ಸಂಚಾರಕ್ಕೆ ಬಿಎಂಟಿಸಿ ಅಥವಾ ಮೆಟ್ರೋ ಪ್ರಯಾಣ ಇದರಲ್ಲಿ ಯಾವುದು ಬೆಸ್ಟ್ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಬೆಂಗಳೂರಿನಲ್ಲಿ ಈಗ ಎರಡು ರೀತಿಯ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿವೆ. ಒಂದು ಬೆಂಗಳೂರು ಮೆಟ್ರೋಪಾಲಿಟಿನ್ ಸಾರಿಗೆ ನಿಗಮ(ಬಿಎಂಟಿಸಿ) ಮತ್ತೊಂದು ನಮ್ಮ ಮೆಟ್ರೋ.
ಈ ಎರಡು ಸಾರಿಗೆ ವಿಧಾನಗಳಲ್ಲಿ ಬೆಂಗಳೂರಿನ ನಾಗರೀಕರು ಯಾವುದನ್ನು ಅತಿ ಹೆಚ್ಚು ಬಳಸುತ್ತಾರೆ? ದೂರದ ಪ್ರಯಾಣ ಮತ್ತು ಹತ್ತಿರದ ಪ್ರಯಾಣಕ್ಕೆ ಯಾವ ವಿಧಾನವನ್ನು ಬಳಸುತ್ತಾರೆ ಎಂಬ ಕುತೂಹಲ ಇರಬೇಕಲ್ಲವೇ ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಒಂದು ಕಾಲದಲ್ಲಿ ದೂರದ ಪ್ರಯಾಣಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಸಾವಿರಾರು ನಾಗರೀಕರಿಗೆ ಬಿಎಂಟಿಸಿ ಬಸ್ ಪ್ರಯಾಣವೇ ಆಧಾರವಾಗಿತ್ತು. ನಂತರದ ದಿನಗಳಲ್ಲಿ ಆಟೋ, ಕ್ಯಾಬ್ ಓಲಾ ಉಬರ್ ಏನೆಲ್ಲಾ ಸಾರಿಗೆ ವಿಧಾನಗಳು ರಸ್ತೆಗಿಳಿದರೂ ಬಿಎಂಟಿಸಿಯನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ.
ಈಗಲೂ ಒಟ್ಟು ಪ್ರಯಾಣಿಕರು ಸಂಚರಿಸುವ ಅತಿ ದೊಡ್ಡ ಸಾರಿಗೆ ವಿಧಾನ ಬಿಎಂಟಿಸಿ. ಆದರೆ ದೂರದ ಪ್ರಯಾಣಕ್ಕೆ ಮೆಟ್ರೋ ಬಳಕೆ ಹೆಚ್ಚುತ್ತಿದೆ.
ಶೇ.50ರಷ್ಟು ಪ್ರಯಾಣಿಕರು 4 ಕಿ.ಮೀವರೆಗೆ ಪ್ರಯಾಣಿಸಲು ಬಿಎಂಟಿಸಿ ಬಳಸಿದರೆ ಶೇ.80ರಷ್ಟು ಪ್ರಯಾಣಿಕರು 10 ಕಿ.ಮೀ ಅಥವಾ ಅದಕ್ಕಿಂತಲೂ ಕಡಿಮೆ ದೂರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ಮೆಟ್ರೋ ವಿಸ್ತರಣೆಯಿಂದ ನಾಗರೀಕರ ಪ್ರಯಾಣ ವಿಧಾನ ಬದಲಾಗಿದೆ. ಚಲ್ಲಘಟ್ಟದಿಂದ ಕಾಡುಗೋಡಿವರೆಗೆ ನೇರಳೆ ಮಾರ್ಗ ವಿಸ್ತರಣೆಗೊಂಡ ನಂತರ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಸರಾಸರಿ ದೂರ 13 ಕಿ.ಮೀ ಗೆ ಏರಿಕೆಯಾಗಿದೆ ಮತ್ತು ಸರಾಸರಿ ಟಿಕೆಟ್ ಖರೀದಿ ದರ 35 ರೂ.ಗಳಾಗಿವೆ. ಈ ನೇರಳೆ ಮಾರ್ಗ ಆರಂಭವಾಗುವುದಕ್ಕೂ ಮುನ್ನ ಸರಾಸರಿ ಪ್ರಯಾಣದ ದೂರ 10 ಕಿಮೀ.ಗಳಾಗಿದ್ದವು.
ಮೆಟ್ರೋ ಸಾರಿಗೆ ಹೊಸ ಹೊಸ ಮಾರ್ಗಗಳಿಗೆ ವಿಸ್ತರಣೆಗೊಂಡ ನಂತರ ಸಾರ್ವಜನಿಕರು ದೂರದ ಪ್ರಯಾಣಕ್ಕೆ ನಮ್ಮ ಮೆಟ್ರೋ ಮತ್ತು ಹತ್ತಿರದ ಪ್ರಯಾಣಕ್ಕೆ ಬಿಎಂಟಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಆಧರಿಸಿ ಬಿಎಂಟಿಸಿಯೂ ಬಸ್ ಸಂಚಾರದ ವಿಧಾನವನ್ನು ಬದಲಾಯಿಸಿಕೊಂಡಿದೆ. ಮೆಟ್ರೋಗೆ ಪರ್ಯಾಯವಾಗಿ ಬಸ್ ಗಳನ್ನು ಓಡಿಸುತ್ತಿದ್ದೇವೆ. ಮೆಟ್ರೋ ನಿಲ್ದಾಣಗಳಿಂದ ಪೂರಕ ಸೇವೆಯನ್ನು ಒದಗಿಸುತ್ತಿದ್ದೇವೆ. ಬಿಎಂಟಿಸಿಯೂ ಹೊಸ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದು ಬಸ್ ಸಂಚಾರ ಆರಂಭಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಸ್ಟೇಜ್ ಆಧಾರದಲ್ಲಿ ಹೇಳುವುದಾದರೆ ಒಂದು ಸ್ಟೇಜ್ ಗೆ 2 ಕಿಮೀ ಎಂದಿಟ್ಟುಕೊಂಡರೂ 5 ರೂ. ನೀಡಿ 2 ಕಿಮೀ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ.25.3ರಷ್ಟಿದೆ. 10 ರೂ. ಟಿಕೆಟ್ ಖರೀದಿಸಿ ಶೇ.16.1 ರಷ್ಟು ಪ್ರಯಾಣಿಕರು 4 ಕಿಮೀವರೆಗೆ ಪ್ರಯಾಣಿಸುತ್ತಾರೆ.
ಶೇ.13.3 ರಷ್ಟು ಮಂದಿ 15 ರೂ. ನೀಡಿ 6 ಕಿಮೀ ಪ್ರಯಾಣ ಮಾಡುತ್ತಾರೆ. ಬಿಎಂಟಿಸಿಯು 2ನೇ ಸ್ಟೇಜ್ ನಿಂದ 36 ನೇ ಸ್ಟೇಜ್ ವರೆಗೂ ಅಂದರೆ 2 ಕಿಮೀ ಯಿಂದ 72 ಕಿಮೀ ವರೆಗೆ ಬಸ್ ಗಳನ್ನು ಓಡಿಸುತ್ತದೆ. 5 ರೂ ನಿಂದ ಹಿಡಿದು 30 ರೂವರೆಗೂ ಪ್ರಯಾಣ ದರ ಇರುತ್ತದೆ.
ಬಿಎಂಟಿಸಿ ವಿಶ್ಲೇಷಣೆ ಪ್ರಕಾರ ಶೇ.90ರಷ್ಟು ಪ್ರಯಾಣಿಕರು 20 ರೂ ಟಿಕೆಟ್ ಖರೀದಿಸಿ14 ಕಿಮೀ ಪ್ರಯಾಣಿಸುತ್ತಾರೆ. 25 ರೂಪಾಯಿಗಳನ್ನು ಮೀರಿ ಟಿಕೆಟ್ ಖರೀಸುವವರ ಸಂಖ್ಯೆ ಶೇ.10 ರಷ್ಟಿರಬಹುದು ಎಂದು ಬಿಎಂಟಿಸಿ ಮೂಲಗಳು ಹೇಳುತ್ತವೆ.
ಮೆಟ್ರೋ ರೈಲು ಸಂಚಾರವು ಬಿಎಂಟಿಸಿ ಆದಾಯವನ್ನು ನುಂಗಿ ಹಾಕುತ್ತಿದೆ ಎಂದು ಹೇಳಲಾಗದು. ಬಿಎಂಟಿಸಿ ಬಸ್ ಗಳಲ್ಲಿ ದಿನಂಪ್ರತಿ 43 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದರೆ ನೇರಳೆ ಮಾರ್ಗದ ವಿಸ್ತರಣೆ ನಂತರವೂ ನಮ್ಮ ಮೆಟ್ರೋದಲ್ಲಿ 7.5 ಲಕ್ಷ ಮಂದಿ ಮಾತ್ರ ಪ್ರಯಾಣಿಸುತ್ತಾರೆ. ಹಾಗಾಗಿ ಬಿಎಂಟಿಸಿಯೇ ಮೊದಲು ಎಂದು ಹೇಳಲಾಗಿದೆ.