ಅಂಕಾರಾ: ಹಮಾಸ್ ಉಗ್ರರನ್ನು (Hamas Terrorist) ಸರ್ವನಾಶ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಇಸ್ರೇಲ್ (Israel) ಗಾಜಾ ಮೇಲೆ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ಹೊತ್ತಲ್ಲಿಯೇ ಮಹತ್ವದ ಬೆಳವಣಿಗೆ ನಡೆದಿದ್ದು ಗಾಜಾ ನಗರವನ್ನು ಎರಡಾಗಿ ವಿಭಜಿಸಿರುವುದಾಗಿ (Split Gaza in Two) ಇಸ್ರೇಲ್ ಸೇನೆ ಘೋಷಿಸಿದೆ.
ಇದು ಅತ್ಯಂತ ಪ್ರಮುಖ ಘಟ್ಟ. ನಾವು ಇನ್ನಷ್ಟು ಜೋರಾಗಿ ದಾಳಿ ಮಾಡಲಿದ್ದೇವೆ ಎಂದು ಪ್ರಕಟಿಸಿದೆ. ಈಗಾಗಲೇ ದಕ್ಷಿಣ ಗಾಜಾ ಪ್ರಾಂತ್ಯವನ್ನು ತಲುಪಿರುವ ಐಡಿಎಫ್ (IDF) ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನಿಂದಲೂ ಗಾಜಾವನ್ನು ಪ್ರವೇಶಿಸುವ ಸಾಧ್ಯತೆಯಿದೆ. ನಾವು ಗೆಲ್ಲುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಘೋಷಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಿಯರ್ ಅಡ್ಮಿರಲ್ ಡೆನಿಯಲ್ ಹಗರಿ, ಇಸ್ರೇಲ್ ಸೇನೆಯು ಗಾಜಾ ನಗರವನ್ನು ಸುತ್ತುವರೆದಿದೆ. ಮುತ್ತಿಗೆ ಹಾಕಿದ ನಂತರ ಉತ್ತರ ಗಾಜಾ ಮತ್ತು ದಕ್ಷಿಣ ಗಾಜಾ ಎಂದು ವಿಭಜಿಸಲಾಗಿದೆ. ಎರಡು ನಗರಗಳ ಮಧ್ಯೆ ಸಂಪರ್ಕ ಕಡಿತ ಮಾಡಲಾಗಿದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಇದು ಮಹತ್ವದ ಹಂತ ಎಂದು ಹೇಳಿದರು. ಇಸ್ರೇಲ್ ಮಾಧ್ಯಮಗಳ ಪ್ರಕಾರ ಮುಂದಿನ 48 ಗಂಟೆಯಲ್ಲಿ ಇಸ್ರೇಲ್ ಸೇನೆ ಗಾಜಾ ನಗರದ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿದೆ.